ವಿಮಾನ ಯಾನದಲ್ಲಿ ದಾಖಲೆ: 2023ರಲ್ಲಿ 15 ಕೋಟಿ ಪ್ರಯಾಣಿಕರು !
Photo: freepik
ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ದೇಶೀಯ ವಿಮಾನ ಯಾನಿಗಳ ಸಂಖ್ಯೆ ಕೋವಿಡ್ ಪೂರ್ವ ಮಟ್ಟವನ್ನು ತಲುಪಿದ್ದು ಮಾತ್ರವಲ್ಲದೇ ಇದುವರೆಗಿನ ಗರಿಷ್ಠ ಸಂಖ್ಯೆಯನ್ನು ತಲುಪಿದೆ. ಕಳೆದ ವರ್ಷದ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ದಾಖಲೆಯ 15.2 ಕೋಟಿ ಪ್ರಯಾಣಿಕರು ವಿಮಾನಯಾನ ಕೈಗೊಂಡಿದ್ದಾರೆ ಎಂದು ಡಿಜಿಸಿಎ ಸೋಮವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಇದುವರೆಗೆ ಅತ್ಯಧಿಕ ಅಂದರೆ 14.4 ಕೋಟಿ ಪ್ರಯಾಣಿಕರು 2019ರಲ್ಲಿ ವಿಮಾನಯಾನ ಕೈಗೊಂಡಿದ್ದರು.
2020ರಲ್ಲಿ ವಿಮಾನಯಾನಿಗಳ ಸಂಖ್ಯೆ 6.3 ಕೋಟಿಗೆ ಕುಸಿದಿತ್ತು. ಏಕೆಂದರೆ ಆ ಅವಧಿಯಲ್ಲಿ ಎರಡು ತಿಂಗಳ ಕಾಲ ರಾಷ್ಟ್ರೀಯ ಲಾಕ್ ಡೌನ್ ಸಂದರ್ಭದಲ್ಲಿ ವಿಮಾನಯಾನವನ್ನು ರದ್ದುಪಡಿಸಲಾಗಿತ್ತು. 2021ರಲ್ಲಿ ಸ್ವಲ್ಪಮಟ್ಟಿಗೆ ಈ ಸಂಖ್ಯೆ ಸುಧಾರಿಸಿ 8.4 ಕೋಟಿ ಆದರೆ, 2022ರಲ್ಲಿ ವಿಮಾನಯಾನಿಗಳ ಸಂಖ್ಯೆ 12.3 ಕೋಟಿ ಆಗಿತ್ತು. ಇಂಡಿಗೋದ ಮಾರುಕಟ್ಟೆ ಪಾಲು 2023ರಲ್ಲಿ ಶೇಕಡ 60.5ರಷ್ಟಾಗಿದೆ. ಟಾಟಾ ಸಮೂಹದ ಏರ್ ಇಂಡಿಯಾ (9.7%), ವಿಸ್ತಾರ (9.1%) ಮತ್ತು ಎಐಎಕ್ಸ್ ಕನೆಕ್ಟ್ (7.2%) ಇವುಗಳ ಸಂಯೋಜಿತ ಪಾಲು ಶೇಕಡ 26ರಷ್ಟಾಗಿದೆ. ಸ್ಪೈಸ್ ಜೆಟ್ ಮತ್ತು ಆಕಾಶ ಸಂಸ್ಥೆಗಳ ಮಾರುಕಟ್ಟೆ ಪಾಲು ಕ್ರಮವಾಗಿ ಶೇಕಡ 5.5 ಹಾಗೂ 4.1ರಷ್ಟಾಗಿವೆ. ಇತರ ವಿಮಾನಯಾನ ಸಂಸ್ಥೆಗಳ ಪಾಲು ಶೇಕಡ 3.9ರಷ್ಟು ಎಂದು ಡಿಜಿಸಿಎ ವಿವರಿಸಿದೆ.
ಮಬ್ಬು ಕವಿದ ಡಿಸೆಂಬರ್ ತಿಂಗಳಲ್ಲಿ ವಿಮಾನಯಾನ ಸಂಸ್ಥೆಗಳ ಕ್ಷಮತೆ ಭಾರಿ ಕುಸಿತ ಕಂಡಿದೆ. ಆಕಾಶ ಸಂಸ್ಥೆಯ ಆನ್ ಟೈಮ್ ಸಾಧನೆ ಶೇಕಡ 72.7ರಷ್ಟು ಆಗಿದ್ದು, ವಿಸ್ತಾರ ಶೇಕಡ 70.8, ಇಂಡಿಗೋ ಸಾಧನೆ ಶೇಕಡ 68ರಷ್ಟು ಆಗಿತ್ತು. ಎಐಎಕ್ಸ್ ಕನೆಕ್ಟ್ ಶೇಕಡ 65.7, ಏರ್ಇಂಡಿಯಾ ಶೇಕಡ 52.4 ಸಾಧನೆ ದಾಖಲಿಸಿವೆ. ಸ್ಪೈಸ್ ಜೆಟ್ ನ ಆನ್ಟೈಮ್ ಕ್ಷಮತೆ ಕಳೆದ ತಿಂಗಳು 29.9ರಷ್ಟಾಗಿತ್ತು.
ಕಳೆದ ತಿಂಗಳು 3.6 ಲಕ್ಷ ದೇಶೀಯ ವಿಮಾನಯಾನಿಗಳಿಗೆ ವಿಮಾನ ಪ್ರಯಾಣ ವಿಳಂಬವಾಗಿದ್ದು, ಈ ಸಂದರ್ಭ ಅವರ ಸತ್ಕಾರಕ್ಕೆ 5.4 ಕೋಟಿ ರೂಪಾಯಿ ವೆಚ್ಚ ಮಾಡಿವೆ ಎಂದು ಡಿಜಿಸಿಎ ಹೇಳಿದೆ.