ಬಾಂಬ್ ಬೆದರಿಕೆ: ಬೆಂಗಳೂರಿಗೆ ತೆರಳುತ್ತಿದ್ದ ವಿಮಾನ ದಿಲ್ಲಿಗೆ ವಾಪಸ್
ಎರಡು ದಿನಗಳಲ್ಲಿ 10 ವಿಮಾನಯಾನಗಳಿಗೆ ಬಾಂಬ್ ಬೆದರಿಕೆ
ಆಕಾಶ ಏರ್ ವಿಮಾನ | ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬುಧವಾರ ದಿಲ್ಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ 184 ಜನರನ್ನು ಹೊತ್ತಿದ್ದ ಆಕಾಶ ಏರ್ನ ವಿಮಾನವು ಬಾಂಬ್ ಬೆದರಿಕೆ ಕರೆಯಿಂದಾಗಿ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿದೆ.
ವಿಮಾನದಲ್ಲಿ ಮೂರು ಶಿಶುಗಳು ಸೇರಿದಂತೆ 177 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಗಳಿದ್ದರು. ಭದ್ರತಾ ಎಚ್ಚರಿಕೆಯ ಬಳಿಕ ಆಕಾಶ ಏರ್ನ ತುರ್ತು ಪ್ರತಿಕ್ರಿಯಾ ತಂಡಗಳು ಪರಿಸ್ಥಿತಿಯ ಮೇಲೆ ನಿಗಾಯಿರಿಸಿದ್ದವು ಮತ್ತು ಸಾಕಷ್ಟು ಎಚ್ಚರಿಕೆಯೊಂದಿಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಮರಳುವಂತೆ ಪೈಲಟ್ಗೆ ಸೂಚಿಸಿದ್ದವು. ಅಪರಾಹ್ನ ಎರಡು ಗಂಟೆಯ ಸುಮಾರಿಗೆ ವಿಮಾನವು ಸುರಕ್ಷಿತವಾಗಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದರು.
ಮಂಗಳವಾರ ಏಳು ವಿಮಾನಯಾನಗಳಿಗೆ ಎಕ್ಸ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು, ಇವುಗಳಲ್ಲಿ ಒಂದು ಅಮೆರಿಕಕ್ಕೆ ತೆರಳುತ್ತಿತ್ತು. ಸೋಮವಾರ ಮುಂಬೈನಿಂದ ಹಾರಾಟ ಆರಂಭಿಸಿದ್ದ ಮೂರು ಅಂತರರಾಷ್ಟ್ರೀಯ ಯಾನಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ಈ ಬಾಂಬ್ ಬೆದರಿಕೆ ಕರೆಗಳು ಹುಸಿಯಾಗಿದ್ದವು ಎನ್ನುವುದು ದೃಢಪಟ್ಟಿತ್ತು.
ಮಂಗಳವಾರ ಚಿಕಾಗೋದಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಬಾಂಬ್ ಬೆದರಿಕೆ ಕರೆಯಿಂದಾಗಿ ಕೆನಡಾದ ವಿಮಾನ ನಿಲ್ದಾಣವೊಂದರಲ್ಲಿ ತುರ್ತು ಭೂಸ್ಪರ್ಶವನ್ನು ಮಾಡಿತ್ತು. ಸಿಬ್ಬಂದಿಗಳು ಸೇರಿದಂತೆ ಒಟ್ಟು 211 ಜನರು ಈ ವಿಮಾನದಲ್ಲಿದ್ದರು.
ಕಳೆದ ಎರಡು ದಿನಗಳಲ್ಲಿ ಕನಿಷ್ಠ 10 ಭಾರತೀಯ ವಿಮಾನಯಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಸಮಗ್ರ ತಪಾಸಣೆ ನಡೆಸಿದ ಬಳಿಕ ಈ ಎಲ್ಲ ಕರೆಗಳು ಹುಸಿಯಾಗಿದ್ದವು ಎನ್ನುವುದು ದೃಢಪಟ್ಟಿತ್ತು.