ಮತ್ತೆ ಮುಂದುವರಿದ ಹುಸಿ ಕರೆ | ಒಂದೇ ದಿನ 25 ವಿಮಾನಗಳಿಗೆ ಬಾಂಬ್ ಬೆದರಿಕೆ!
PC : PTI
ಹೊಸದಿಲ್ಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ 25ಕ್ಕೂ ಅಧಿಕ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ಶುಕ್ರವಾರ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಶುಕ್ರವಾರ ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್ಜೆಟ್ನ ತಲಾ ಏಳು ವಿಮಾನಗಳಿಗೆ ಬೆದರಿಕೆಯೊಡ್ಡಲಾಗಿದೆ. ಏರ್ ಇಂಡಿಯಾದ 6 ವಿಮಾನಗಳನ್ನು ಗುರಿಯಾಗಿಸಿ ಬೆದರಿಕೆಯನ್ನು ಕರೆ ನೀಡಲಾಗಿದೆ.
ಗುರುವಾರ ಒಂದೇ ದಿನದಲ್ಲಿ 95 ವಿಮಾನಗಳಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಕಳೆದ 12 ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ 275ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿತ್ತು.
ಬಾಂಬ್ ಬೆದರಿಕೆ ಸಂದೇಶ ವಿಮಾನಗಳ ಕಾರ್ಯ ನಿರ್ವಹಣೆ ಮೇಲೆ ಪ್ರಭಾವವನ್ನು ಬೀರಿದೆ. ನೂರಾರು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ. ಅರೆಸೇನಾ ಸಿಬ್ಬಂದಿ ಮತ್ತು ವಿಮಾನಯಾನ ಅಧಿಕಾರಿಗಳಿಗೆ ಭದ್ರತೆ ಕುರಿತು ತಲೆನೋವು ಸೃಷ್ಟಿಸಿದೆ.
ಸರಣಿ ಬೆದರಿಕೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಂದ ಹಿನ್ನೆಲೆ ಗುರುವಾರ ಕೇಂದ್ರ ಸರಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಮೆಟಾ ಮತ್ತು ಎಕ್ಸ್ ಗೆ ಮಾಹಿತಿ ನೀಡುವಂತೆ ನಿರ್ದೇಶನವನ್ನು ನೀಡಿದೆ.