ದೇಶಾದ್ಯಂತದ ವಿಮಾನ ನಿಲ್ದಾಣಗಳಿಗಾಗಿ ಎಕ್ಸ್-ರೇ ಯಂತ್ರಗಳ ಟೆಂಡರ್ನಲ್ಲಿ ಭ್ರಷ್ಟಾಚಾರದ ವಾಸನೆ, ವಿವಾದ ಸೃಷ್ಟಿ
ಎಕ್ಸ್-ರೇ ಯಂತ್ರಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ► ನಾಗರಿಕ ವಾಯುಯಾನ ಸಚಿವರಿಗೆ ಪತ್ರ ಬರೆದ ಕೇಂದ್ರ ಸಚಿವ ರಾಮದಾಸ ಆಠವಳೆ, ಬಿಜೆಪಿ ಸಂಸದೆ ಹೇಮಾಮಾಲಿನಿ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗೇಜ್ ತಪಾಸಣೆಗಾಗಿ 770 ಡ್ಯುಯಲ್ ಯೂಸ್ ಎಕ್ಸ್-ರೇ ಯಂತ್ರ(ಎಕ್ಸ್ಬಿಐಎಸ್)ಗಳ ಖರೀದಿಗಾಗಿ ಕರೆದಿದ್ದ ಟೆಂಡರ್ ವಿವಾದದಲ್ಲಿ ಸಿಲುಕಿದ್ದು, ಭ್ರಷ್ಟಾಚಾರದ ಮತ್ತು ನಿರ್ದಿಷ್ಟ ಕಂಪನಿಗೆ ಅನುಕೂಲವೊದಗಿಸಲು ಪ್ರಯತ್ನಗಳ ದೂರುಗಳು ಕೇಳಿ ಬಂದಿವೆ ಎಂದು thehindu.com ವರದಿ ಮಾಡಿದೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ ಆಠವಳೆ ಮತ್ತು ಮಥುರಾ ಸಂಸದೆ ಹೇಮಾಮಾಲಿನಿ ಅವರು ಈ ವಿಷಯವನ್ನು ಪ್ರಸ್ತಾವಿಸಿ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
‘ಅನಗತ್ಯ ಒಲವು’ ಪಡೆದುಕೊಂಡಿರುವ ಭಾರತೀಯ ಕಂಪನಿಯಿಂದ ಪೂರೈಕೆಯಾಗಿರುವ ಎಕ್ಸ್-ರೇ ಯಂತ್ರಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿಲ್ಲ ಎನ್ನುವುದೂ ಬೆಳಕಿಗೆ ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ ಸಿಐಎಸ್ಎಫ್ ಮತ್ತು ಹಲವು ವಿಮಾನ ನಿಲ್ದಾಣಗಳು ಹಲವಾರು ಸಂದರ್ಭಗಳಲ್ಲಿ ಕಳವಳಗಳನ್ನು ವ್ಯಕ್ತಪಡಿಸಿವೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ವು ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಡ್ಯೂಯಲ್ ವ್ಯೆ ಹ್ಯಾಂಡ್ ಬ್ಯಾಗೇಜ್ ಮತ್ತು ನೋಂದಾಯಿತ ಬ್ಯಾಗೇಜ್ ಎಕ್ಸ್ಬಿಐಎಸ್ಗಳ ಪೂರೈಕೆ,ಸ್ಥಾಪನೆ,ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಒಂದು ವರ್ಷದ ಆನ್ಸೈಟ್ ವಾರಂಟಿ ಮತ್ತು ಬಿಡಿಭಾಗಗಳೊಂದಿಗೆ ಏಳು ವರ್ಷಗಳ ಸಮಗ್ರ ವಾರ್ಷಿಕ ನಿರ್ವಹಣಾ ಒಪ್ಪಂದಕ್ಕಾಗಿ 2023, ಅ.16ರೊಳಗೆ ಸಲ್ಲಿಕೆಯಾಗುವಂತೆ ಟೆಂಡರ್ ಅನ್ನು ಹೊರಡಿಸಿತ್ತು. ಟೆಂಡರ್ನ ಅಂದಾಜು ವೆಚ್ಚ 306.5 ಕೋಟಿ ರೂ.ಆಗಿತ್ತು. ವಿಮಾನ ನಿಲ್ದಾಣದ ಭದ್ರತಾ ಕೌಂಟರ್ಗಳಲ್ಲಿಯ ಈಗಾಗಲೇ ತಮ್ಮ ಜೀವಿತಾವಧಿಯನ್ನು ಪೂರೈಸಿದ ಸ್ಕ್ಯಾನರ್ಗಳ ಬದಲಿಗೆ ಈ ಯಂತ್ರಗಳನ್ನು ಖರೀದಿಸಲು ಉದ್ದೇಶಿಸಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.
ಭಾರತೀಯ ಕಂಪನಿಯೊಂದು ಬಿಡ್ಗೆ ಅರ್ಹತೆ ಪಡೆದುಕೊಂಡಿದ್ದರೆ ಬಿಡ್ಗಾಗಿ ಇನ್ನೊಂದು ಭಾರತೀಯ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಬ್ರೆಝಿಲ್ನ ಕಂಪನಿಯನ್ನು ತಾಂತ್ರಿಕ ಕಾರಣಗಳಿಂದ ಅನರ್ಹಗೊಳಿಸಲಾಗಿತ್ತು.
ಆಠವಳೆ ಜೂ.18ರಂದು ನಾಯ್ಡು ಅವರಿಗೆ ಬರೆದಿರುವ ಪತ್ರದಲ್ಲಿ, ‘ಎಎಐ ನಿಯಮಗಳನ್ನು ಉಲ್ಲಂಘಸಿ ಟೆಂಡರ್ನ ಮೌಲ್ಯಮಾಪನದಲ್ಲಿ ಭ್ರಷ್ಟಾಷಾರದ ಶಂಕೆಯ ಬಗ್ಗೆ ಬ್ರೆಝಿಲ್ ಕಂಪನಿಯು ದೂರಿಕೊಂಡಿದೆ. ಈ ಕಂಪನಿಗೆ ಅನ್ಯಾಯವನ್ನು ತಪ್ಪಿಸಲು ಪ್ರಕರಣದ ತನಿಖೆ ಮತ್ತು ನ್ಯಾಯಸಮ್ಮತ ವಿಚಾರಣೆಗಾಗಿ ಸಂಬಂಧಿತರಿಗೆ ನಿರ್ದೇಶನಗಳನ್ನು ನೀಡುವಂತೆ ಕೋರುತ್ತೇನೆ’ ಎಂದು ತಿಳಿಸಿದ್ದಾರೆ.
ಹೇಮಾಮಾಲಿನಿ ಅವರು ಜೂ.27ರಂದು ನಾಯ್ಡು ಅವರಿಗೆ ಬರೆದಿರುವ ಪತ್ರದಲ್ಲಿ, ಟೆಂಡರ್ನ ಮೌಲ್ಯಮಾಪನದಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಮತ್ತು ಎಎಐ ಕೆಲವು ಬಿಡ್ಡರ್ಗಳಿಗೆ ಅನುಚಿತ ಒಲವನ್ನು ತೋರಿಸಿದೆ ಎಂದು ನಾನೂ ಭಾವಿಸಿದ್ದೇನೆ ಮತ್ತು ಆರ್ಡರ್ ಸಲ್ಲಿಕೆಗೆ ಮುನ್ನ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಎಎಐ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ಪ್ರಯತ್ನವಾಗಿ ಜೂನ್ 2021ರಲ್ಲಿ ಹೊರಡಿಸಿದ್ದ ಟೆಂಡರ್ನಡಿ ಕಂಪನಿಯಿಂದ 219 ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಿತ್ತು. ಆದರೆ ನಿಯಮಗಳ ಉಲ್ಲಂಘನೆ ಮತ್ತು ಕಂಪನಿ ಪರವಾಗಿ ಅನುಚಿತ ಒಲವು ತೋರಿಸಿದ್ದು ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿತ್ತು. ಯಂತ್ರಗಳ ಮೌಲ್ಯಮಾಪನ ಸಂದರ್ಭದಲ್ಲಿ ನ್ಯೂನತೆಗಳ ಹೊರತಾಗಿಯೂ ಅವುಗಳನ್ನು ಸ್ವೀಕರಿಸಲಾಗಿತ್ತು ಎಂದು ಬಲ್ಲ ಅಧಿಕಾರಿಯೋರ್ವರು ತಿಳಿಸಿದರು.
219 ಸ್ಕ್ಯಾನರ್ಗಳ ಪೈಕಿ 129ನ್ನು ದೇಶಾದ್ಯಂತ ವಿವಿಧ ವಿಮಾನ ನಲ್ದಾಣಗಳಲ್ಲಿ ಸ್ಥಾಪಿಸಲಾಗಿತ್ತು. ಕೆಲವು ವಿಮಾನ ನಿಲ್ದಾಣಗಳು ಅತ್ಯಂತ ಕಳಪೆ ಕಾರ್ಯಕ್ಷಮತೆ ಇತ್ಯಾದಿ ಕಾರಣಗಳನ್ನು ನೀಡಿ ಈ ಸ್ಕ್ಯಾನರ್ಗಳನ್ನು ಸ್ವೀಕರಿಸಿರಲಿಲ್ಲ.
ತೀರ ಇತ್ತೀಚಿಗೆ, ಅದರೆ ಜುಲೈ ಅಂತ್ಯದಲ್ಲಿ ದಿಲ್ಲಿ ಟರ್ಮಿನಲ್ಗಳಲ್ಲಿ ಈ ಯಂತ್ರಗಳ ತೀವ್ರ ದೋಷಗಳ ಕುರಿತು ಸಿಐಎಸ್ಎಫ್ ವರದಿಗಳನ್ನು ಸಲ್ಲಿಸಿದೆ. ನಾಗರಿಕ ವಾಯುಯಾನ ಭದ್ರತಾ ಘಟಕವು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿರುವ ವಿಭಿನ್ನ ಸ್ಕ್ಯಾನರ್ಗಳ ತುಲನಾತ್ಮಕ ವರದಿಯನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.