ಸ್ಟಾರ್ಲಿಂಕ್ ಇಂಟರ್ನೆಟ್ ಸ್ಪೇಸ್ ಎಕ್ಸ್ ಜೊತೆ ಏರ್ಟೆಲ್ ಒಡಂಬಡಿಕೆ

ಏರ್ಟೆಲ್ ಸಂಸ್ಥೆ | PC : Airtel logo
ಹೊಸದಿಲ್ಲಿ: ಭಾರತದಲ್ಲಿರುವ ತನ್ನ ಗ್ರಾಹಕರಿಗೆ ಸ್ಟಾರ್ಲಿಂಕ್ನ ಅತಿ ವೇಗದ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಏರ್ಟೆಲ್ ಸಂಸ್ಥೆಯು, ಅಮೆರಿಕದ ಬಿಲಿಯಾಧೀಶ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ.
ಭಾರತದಲ್ಲಿ ತನ್ನ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸ್ಟಾರ್ಲಿಂಕ್ ಸಹಿಹಾಕಿರುವ ಮೊದಲ ಒಪ್ಪಂದ ಇದಾಗಿದೆ. ಏರ್ಟೆಲ್ ನ ರಿಟೇಲ್ ಮಳಿಗೆಗಳಲ್ಲಿ ಸ್ಟಾರ್ಲಿಂಕ್ ನ ಉಪಕರಣಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಏರ್ಟೆಲ್ ಹಾಗೂ ಸ್ಪೇಸ್ಎಕ್ಸ್ ರೂಪುರೇಷೆಗಳನ್ನು ಸಿದ್ದಪಡಿಸುತ್ತಿವೆ. ಉದ್ಯಮ ಗ್ರಾಹಕರು, ಶಾಲೆಗಳು, ಆರೋಗ್ಯ ಕೇಂದ್ರಗಳು ಇತ್ಯಾದಿಗಳಲ್ಲದೆ, ಭಾರತದ ಬಹುತೇಕ ಗ್ರಾಮೀಣ ಭಾಗಗಳಲ್ಲಿಯೂ ಸ್ಟಾರ್ಲಿಂಕ್ ಸೇವೆ ದೊರೆಯಲಿದೆ ಎಂದು ಏರ್ಟೆಲ್ ನ ಹೇಳಿಕೆ ತಿಳಿಸಿದೆ.
‘‘ಭಾರತದಲ್ಲಿರುವ ಏರ್ಟೆಲ್ ಗ್ರಾಹಕರಿಗೆ ಸ್ಟಾರ್ಲಿಂಕ್ ಸೇವೆಯನ್ನು ಒದಗಿಸಲು ಸ್ಪೇಸ್ ಎಕ್ಸ್ ಜೊತೆ ಕಾರ್ಯಪ್ರವೃತ್ತವಾಗಿರುವುದು ಒಂದು ಮಹತ್ವದ ಮೈಲುಗಲ್ಲಾಗಿದೆ ಹಾಗೂ ಮುಂದಿನ ತಲೆಮಾರಿನ ಉಪಗ್ರಹ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಇದು ಇನ್ನಷ್ಟು ಪ್ರದರ್ಶಿಸುತ್ತದೆ’’ ಎಂದು ಭಾರ್ತಿ ಏರ್ಟೆಲ್ ಲಿಮಿಟೆಡ್ ಆಡಳಿತ ನಿರ್ದೇಶಕ ಹಾಗೂ ಉಪಾಧ್ಯಕ್ಷ ಗೋಪಾಲ್ ವಿಠಲ್ ತಿಳಿಸಿದ್ದಾರೆ.
ಸ್ಪೇಸ್ಎಕ್ಸ್ ಒಡೆತನದ ಸ್ಟಾರ್ಲಿಂಕ್ ತನ್ನ ಉಪಗ್ರಹ ಜಾಲಗಳ ಮೂಲಕ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸುತ್ತಿದೆ. ಜಗತ್ತಿನ ಅತ್ಯಂತ ಸುಧಾರಿತ ಇಂಟರ್ನೆಟ್ ಸೇವೆಯಾದ ಸ್ಟಾರ್ಲಿಂಗ್ ಜಾಗತಿಕ ಮಟ್ಟದಲ್ಲಿ ಮೊಬೈಲ್ ಬ್ರಾಡ್ಬ್ಯಾಂಡ್ ಸೇವೆಯನ್ನು ನೀಡುತ್ತದೆ. ಇದರಿಂದಾಗಿ ವೀಡಿಯೊ ಕರೆಗಳು,ಆನ್ಲೈನ್ ೀಮಿಂಗ್, ಸ್ಟ್ರೀಮಿಂಗ್ ಸೇರಿದಂತೆ ಬ್ರಾಡ್ಬ್ಯಾಂಡ್ ಸೇವೆಗಳನ್ನು ಅತ್ಯಂತ ದುರ್ಗಮ ಪ್ರದೇಶದಲ್ಲಿಯೂ ಪಡೆಯಬಹುದಾಗಿದೆ.
ಪ್ರಸಕ್ತ ಮುಕೇಶ್ ಅಂಬಾನಿಯವರ ರಿಲಯಾನ್ಸ್ ಜಿಯೋ ಭಾರತದ ಅತಿ ದೊಡ್ಡ ಬ್ರಾಡ್ಬ್ಯಾಂಡ್ ಮಾರುಕಟ್ಟೆಯಾಗಿದ್ದು 1.40 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿದೆ. 50 ಕೋಟಿಗೂ ಅಧಿಕ ಮೊಬೈಲ್ ಇಂಟರ್ನೆಟ್ ಬಳಕೆದಾರರನ್ನು ಅದು ಹೊಂದಿದೆ. ಏರ್ಟೆಲ್ ಕೂಡಾ ಸುಮಾರು 30 ಕೋಟಿ ಬ್ರಾಡ್ಬ್ಯಾಂಡ್ ಚಂದಾದರರನ್ನು ಹೊಂದಿದೆ.