ಕೋಮು ದ್ವೇಷವನ್ನು ಸೃಷ್ಟಿಸಬೇಡಿ: ಮುಸ್ಲಿಮರ ವಿರುದ್ಧದ ಟೀಕೆಗೆ ಸಚಿವ ನಿತೇಶ್ ರಾಣೆಗೆ ಅಜಿತ್ ಪವಾರ್ ತರಾಟೆ

Photo | ANI
ಪುಣೆ: ಮುಸ್ಲಿಮರ ಕುರಿತ ಟೀಕೆಗೆ ಸಂಬಂಧಿಸಿ ಬಿಜೆಪಿಯ ನಿತೇಶ್ ರಾಣೆಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತರಾಟೆಗೆ ತೆಗೆದುಕೊಂಡಿದ್ದು, ಕೋಮು ದ್ವೇಷವನ್ನು ಸೃಷ್ಟಿಸದೆ ಸಂಯಮದಿಂದ ವರ್ತಿಸುವಂತೆ ಸಲಹೆ ನೀಡಿದ್ದಾರೆ.
ಮುಸ್ಲಿಮರು ಛತ್ರಪತಿ ಶಿವಾಜಿ ಮಹಾರಾಜರ ಸೇನೆಯ ಭಾಗವಾಗಿರಲಿಲ್ಲ ಎಂದು ಸಚಿವ ನಿತೇಶ್ ರಾಣೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅಜಿತ್ ಪವಾರ್, ಸಾರ್ವಜನಿಕ ಹೇಳಿಕೆಗಳು ಕೋಮು ಸಂಘರ್ಷಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಕೆಲವು ವ್ಯಕ್ತಿಗಳು ಕೆಲವೊಮ್ಮೆ ಮಹಾರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹಾನಿಯುಂಟುಮಾಡುವ ಹೇಳಿಕೆಗಳನ್ನು ನೀಡುತ್ತಾರೆ. ಈ ಹಿಂದೆ ನಾಯಕರು ಕೋಮು ಸೌಹಾರ್ದತೆಯನ್ನು ಕಾಪಾಡಲು ಶ್ರಮಿಸುತ್ತಿದ್ದರು ಎಂದು ಹೇಳಿದರು.
ಶಿವಾಜಿ ಮಹಾರಾಜರು ಎಂದಿಗೂ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾರಿಗೂ ತಾರತಮ್ಯ ಮಾಡಿಲ್ಲ. ಕೋಮು ವೈಷಮ್ಯ ಸೃಷ್ಟಿಸದಂತೆ ರಾಜಕೀಯ ನಾಯಕರು ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು. ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತ ಮುಸ್ಲಿಮರಿದ್ದಾರೆ. ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿ ಹಲವಾರು ಮುಸ್ಲಿಮರು ಯುದ್ಧಸಾಮಗ್ರಿ ಇಲಾಖೆಯನ್ನು ನೋಡಿಕೊಳ್ಳುವುದು ಸೇರಿದಂತೆ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಕ್ಕೆ ಪುರಾವೆಗಳಿವೆ. ಇಂತಹ ತಪ್ಪುದಾರಿಗೆಳೆಯುವ ಹೇಳಿಕೆಗಳ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಅಜಿತ್ ಪವಾರ್ ಹೇಳಿದರು.