ಲೋಕಸಭಾ ಚುನಾವಣೆಯಲ್ಲಿ ಸಹೋದರಿಯ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿ ತಪ್ಪು ಮಾಡಿದೆ ಎಂದ ಅಜಿತ್ ಪವಾರ್
ಅಜಿತ್ ಪವಾರ್ | PC : PTI
ಮುಂಬೈ: ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋದರ ಸಂಬಂಧಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸುವ ನಿರ್ಧಾರವು ತಪ್ಪಾಗಿತ್ತು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಯಾರೂ ಕೂಡಾ ತಮ್ಮ ಮನೆಯನ್ನು ರಾಜಕೀಯ ಪ್ರವೇಶಿಸಲು ಅವಕಾಶ ನೀಡಕೂಡದು ಎಂದು ಸದ್ಯ ರಾಜ್ಯವ್ಯಾಪಿ ‘ಜನ್ ಸಮ್ಮಾನ್ ಯಾತ್ರಾ’ ನಡೆಸುತ್ತಿರುವ ಅಜಿತ್ ಪವಾರ್, ಮರಾಠಿ ಸುದ್ದಿ ವಾಹಿನಿಯೊಂದಿಗಿನ ಮಾತುಕತೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
“ನಾನು ನನ್ನ ಎಲ್ಲ ಸಹೋದರಿಯರನ್ನೂ ಪ್ರೀತಿಸುತ್ತೇನೆ. ಯಾರೂ ಕೂಡಾ ತಮ್ಮ ಮನೆಗೆ ರಾಜಕೀಯ ಪ್ರವೇಶಿಸಲು ಅವಕಾಶ ನೀಡಕೂಡದು. ನನ್ನ ಸಹೋದರಿಯ ಎದುರು ನನ್ನ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ನಾನು ತಪ್ಪು ಮಾಡಿದೆ. ಇದು ಆಗಬಾರದಿತ್ತು. ಆದರೆ, ಎನ್ಸಿಪಿಯ ಸಂಸದೀಯ ಮಂಡಳಿಯು ಈ ನಿರ್ಧಾರ ಕೈಗೊಂಡಿತು. ಆದರೆ, ನನಗೀಗ ಅದು ತಪ್ಪು ನಿರ್ಧಾರವಾಗಿತ್ತು ಎಂದು ಅನ್ನಿಸುತ್ತಿದೆ” ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಎನ್ಸಿಪಿ(ಎಸ್ಪಿ) ಬಣದ ನಾಯಕಿ ಹಾಗೂ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದ್ದ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಪರಾಭವಗೊಂಡಿದ್ದರು. ಇದಾದ ನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.