‘‘ಬಟೇಂಗೆ ತೋ ಕಟೇಂಗೆ’’ ಭಾರತೀಯ ಇತಿಹಾಸದ ಅತ್ಯಂತ ನಕಾರಾತ್ಮಕ ಘೋಷಣೆ : ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ | PC : PTI
ಲಕ್ನೋ : ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ‘‘ಬಟೇಂಗೆ ತೋ ಕಟೇಂಗೆ’’ (ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಾವು ನಾಶವಾಗುತ್ತೇವೆ) ಎಂಬ ಘೋಷಣೆಯಿಂದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದೂರ ಸರಿಯಲು ಆರಂಭಿಸಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಒಗ್ಗಟ್ಟಿನಿಂದ ಇರಿ ಎಂಬುದಾಗಿ ಹಿಂದೂಗಳಿಗೆ ಕರೆ ನೀಡುವಂತೆ ಕಂಡುಬರುವ ಈ ಘೋಷಣೆಯು ‘ಅಸಾಂವಿಧಾನಿಕ’ ವಾಗಿದೆ ಮತ್ತು ದೇಶದ ಇತಿಹಾಸದಲ್ಲೇ ‘‘ಅತ್ಯಂತ ನಕಾರಾತ್ಮಕ’’ವಾಗಿದೆ ಎಂದು ಯಾದವ್ ಬಣ್ಣಿಸಿದರು.
ಇಲ್ಲಿನ ಬಕ್ಷಿ ಕಾ ತಲಾಬ್ ಪ್ರದೇಶದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ‘‘ಮುಖ್ಯಮಂತ್ರಿಯವರ ಘೋಷಣೆಯು ಬ್ರಿಟಿಷರ ‘ವಿಭಜಿಸಿ ಆಳು’ ನೀತಿಯಂತಿದೆ. ಬ್ರಿಟಿಷರು ಹೋಗಿದ್ದಾರೆ, ಆದರೆ ಅವರ ಸಿದ್ಧಾಂತವನ್ನು ಪಾಲಿಸುತ್ತಿರುವ ಜನರು ಅವರ ನೀತಿಯನ್ನು ಮುಂದಕ್ಕೊಯ್ಯುತ್ತಿದ್ದಾರೆ’’ ಎಂದು ಹೇಳಿದರು.
‘‘ ‘ಬಟೋಗೆ ತೋ ಕಟೋಗೆ’ ಎನ್ನುವುದು ದೇಶದ ಇತಿಹಾಸದಲ್ಲೇ ಅತ್ಯಂತ ನಕಾರಾತ್ಮಕ ಹಾಗೂ ಅಸಾಂವಿಧಾನಿಕ ಘೋಷಣೆಯಾಗಿದೆ. ಬಿಜೆಪಿ ನಾಯಕರು ಮತ್ತು ಅದರ ಮಿತ್ರರು ಈ ಘೋಷಣೆಯಿಂದ ದೂರ ಸರಿಯುತ್ತಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.