ಸಿಎಂ ಆದಿತ್ಯನಾಥ್ ಅವರಿಂದ ಶಿಕ್ಷಣದ ನಿರ್ಲಕ್ಷ್ಯ: ಅಖಿಲೇಶ್ ಯಾದವ್

ಅಖಿಲೇಶ್ ಯಾದವ್ | PC : PTI
ಹೊಸದಿಲ್ಲಿ: ಉರ್ದು ಭಾಷೆಯ ಕುರಿತ ಹೇಳಿಕೆಗೆ ಸಂಬಂಧಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಕಾರ್ಯ ನಿರ್ವಹಿಸದ ಶಾಲೆಗಳನ್ನು ಹೊಂದಿರುವ ರಾಜ್ಯ ಉತ್ತರಪ್ರದೇಶ ಎಂದು ಅವರು ಹೇಳಿದ್ದಾರೆ.
ಶಿಕ್ಷಣ ಹಾಗೂ ರಾಜ್ಯದ ಪ್ರಗತಿಯ ಕುರಿತು ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡ ಅಖಿಲೇಶ್ ಯಾದವ್, ದೇಶದಲ್ಲಿ 11 ಲಕ್ಷ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಅದರಲ್ಲಿ ಹೆಚ್ಚಿನ ಶಾಲೆಗಳು ಉತ್ತರಪ್ರದೇಶದಲ್ಲಿವೆ ಎಂಬುದನ್ನು ರಾಜ್ಯ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಾಷೆ ಹಾಗೂ ಪ್ರಗತಿಗಾಗಿ ಏನನ್ನೂ ಮಾಡಿಲ್ಲ ಎಂಬುದು ಇದರಿಂದ ಸ್ಪಷ್ಟ. ನೀವು ದಾಖಲೆಗಳನ್ನು ಪರಿಶೀಲಿಸಿದರೆ, 11 ಲಕ್ಷ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಎಷ್ಟು ಪ್ರೌಢ ಶಾಲೆಗಳು ಬಾಗಿಲು ತೆರೆದಿವೆ? ಅದು ಪಾಲಿಟೆಕ್ನಿಕ್, ಐಐಟಿ ಅಥವಾ ಎಂಜಿನಿಯರಿಂಗ್ ಆಗಿರಲಿ. ಅದನ್ನು ಎಷ್ಟು ಸರಕಾರ ನೋಡಿಕೊಳ್ಳುತ್ತಿದೆ. ಹೀಗಾದರೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಆದಿತ್ಯನಾಥ್ ಅವರು ಉದ್ದೇಶಪೂರ್ವಕವಾಗಿ ಈ ಹಿಂದೂ-ಮುಸ್ಲಿಂ ವಿಷಯವನ್ನು ಎತ್ತುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಇನ್ನೋರ್ವ ನಾಯಕ ಮಾತಾ ಪ್ರಸಾದ್ ಪಾಂಡೆ ಆರೋಪಿಸಿದ್ದಾರೆ.
ಉರ್ದು ಕೂಡ ಒಂದು ಭಾಷೆ. ವಿಧಾನ ಸಭೆಯಲ್ಲಿ ಇನ್ನೊಂದು ದೃಷ್ಟಿಕೋನದಲ್ಲಿ ಈ ವಿಷಯವನ್ನು ಎತ್ತಲಾಗಿದೆ. ಆದರೆ, ಅವರು (ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್) ಹಿಂದೂ ಮುಸ್ಲಿಂ ಕಾರ್ಯ ಸೂಚಿಯನ್ನು ಮುಂದುವರಿಸುವ ಕುರಿತು ಮಾತನಾಡಿದ್ದಾರೆ. ವಿಧಾನ ಸಭೆಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದನ್ನು ನಾವು ವಿರೋಧಿಸಿದ್ದೇವೆ. ಆದರೆ, ಹೇಗೋ ಚರ್ಚೆ ಉರ್ದು ಭಾಷೆಯತ್ತ ತಿರುಗಿತು ಎಂದು ಅವರು ಹೇಳಿದ್ದಾರೆ.
ಭೋಜಪುರಿ ಹಾಗೂ ಅವಧಿ ಭಾಷೆಯನ್ನು ವಿರೋಧಿಸುತ್ತಿರುವುದಕ್ಕೆ ಯೋಗಿ ಆದಿತ್ಯನಾಥ್ ಮಂಗಳವಾರ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮಾಜವಾದಿ ಪಕ್ಷ ಮಕ್ಕಳನ್ನು ಮೌಲವಿಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದರು. ಪ್ರಮುಖ ಪ್ರತಿಪಕ್ಷವಾಗಿರುವ ಸಮಾಜವಾದಿ ಪಕ್ಷ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಸಮಾಜವಾದಿ ಪಕ್ಷದ ನಾಯಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಆದರೆ, ಉರ್ದು ಭಾಷೆಗೆ ಆಗ್ರಹಿಸುತ್ತಾರೆ ಎಂದು ಅವರು ಹೇಳಿದ್ದರು.