ಅಲಿಘರ್ ಮುಸ್ಲಿಂ ವಿವಿ ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್
ಉತ್ತರ ಪ್ರದೇಶ ಸಿಎಂ | PC : PTI
ಲಕ್ನೋ: ಅಲಿಘರ್ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಅಲಿಘರ್ ಮುಸ್ಲಿಂ ವಿವಿ(AMU) ಕೇವಲ ಮುಸ್ಲಿಮರಿಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
ಅಲಿಘರ್ ನ ಖೇರ್ ನಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಎಎಂಯು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ. ಕೇಂದ್ರ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುತ್ತದೆ. ಆದರೆ, ಅಲ್ಪಸಂಖ್ಯಾತರಿಗೆ ಶೇ 50ರಷ್ಟು ಮೀಸಲಾತಿ ನೀಡಲು ಸಿದ್ಧತೆ ನಡೆಯುತ್ತಿದೆ. ಇದು ಹೇಗೆ ಸಾಧ್ಯ? ವಿವಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೂ ಮೀಸಲಾತಿ ಸಿಗಬೇಕು ಎಂದು ಹೇಳಿದ್ದಾರೆ.
ಎಎಂಯುನಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗೆ ಮೀಸಲಾತಿ ನಿರಾಕರಿಸಿರುವುದರ ಹಿಂದೆ ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಕಾಂಗ್ರೆಸ್ ನ ಕೈವಾಡವಿದೆ. ಏಕೆಂದರೆ ಈ ಪಕ್ಷಗಳು 'ವೋಟ್ ಬ್ಯಾಂಕ್' ರಾಜಕೀಯ ಮಾಡುತ್ತಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ವಿರೋಧ ಪಕ್ಷಗಳು ನಿಮ್ಮ ಭಾವನೆಗಳ ಜೊತೆ ಆಟವಾಡುತ್ತಿದೆ. ನೀವು ಕುರುಡರಾಗಬೇಡಿ, ನಮ್ಮಲ್ಲಿ ಒಡಕು ಮೂಡಿದರೆ ಕಗ್ಗೊಲೆಯಾಗುತ್ತದೆ ಎಂಬುವುದನ್ನು ನೆನಪಿಡಿ, ಇತಿಹಾಸವೂ ಇದನ್ನೇ ಹೇಳುತ್ತದೆ ಎಂದು ಹೇಳಿದ್ದಾರೆ.