ಸ್ವಘೋಷಿತ ಗೋ ರಕ್ಷಕರ ಜತೆ ಸಂಘರ್ಷ: ಗೋವಾದ ಎಲ್ಲ ಬೀಫ್ ಶಾಪ್ ಬಂದ್
ಪಣಜಿ: ಕ್ರಿಸ್ ಮಸ್ ಈವ್ ಮುನ್ನಾ ದಿನವಾದ ಸೋಮವಾರ ಗೋವಾ ರಾಜ್ಯದ ಎಲ್ಲೆಡೆ ಬೀಫ್ ಮಾರಾಟಗಾರರು ರಾಜ್ಯಾದ್ಯಂತ ಬೀಫ್ ಶಾಪ್ ಗಳನ್ನು ಮುಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದರು. ಮರ್ಗೋವಾದಲ್ಲಿ ಕಳೆದ ವಾರ ಸ್ವಘೋಷಿತ ಗೋ ರಕ್ಷಕರ ಜತೆ ನಡೆದ ಘರ್ಷಣೆ ಹಿನ್ನೆಲೆಯಲ್ಲಿ ಕಿರುಕುಳವನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಿತು. ಮಂಗಳವಾರ ಕೂಡಾ ಎಲ್ಲ ಬೀಫ್ ಶಾಪ್ ಗಳನ್ನು ಮುಚ್ಚಲಾಗುವುದು ಎಂದು ವರ್ತಕರು ಹೇಳಿದ್ದಾರೆ.
ಸ್ವಘೋಷಿತ ಗೋರಕ್ಷಕರ ಜತೆ ಸಂಘರ್ಷದ ಬಳಿಕ ʼಖುರೇಷಿʼ ಮಾಂಸ ಮಾರಾಟಗಾರರ ಅಸೋಸಿಯೇಶನ್ ತನ್ನ ಸದಸ್ಯರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ. "ಯಾವ ಮಾಂಸ ಮಾರಾಟಗಾರರೂ ಗೋಮಾಂಸ ಮಾರಾಟ ಮಾಡುವುದಿಲ್ಲ. ನಮ್ಮ ಬೇಡಿಕೆಗಳು ಸ್ಪಷ್ಟ" ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅನ್ವರ್ ಬೇಪಾರಿ ತಿಳಿಸಿದ್ದಾರೆ.
ಗೋಮಾಂಸ ಮಾರಾಟಗಾರರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಭೇಟಿ ಕೋರಿದ್ದು, ತಮ್ಮ ಬೇಡಿಕೆಗಳನ್ನು ಮುಂದಿಡಲಿದ್ದಾರೆ. ಗೋಮಾಂಸ ಸಾಗಾಣಿಕೆ ವೇಳೆ ಭದ್ರತೆ ಒದಗಿಸುವುದು ಮತ್ತು ಸ್ವಘೋಷಿತ ಗೋ ರಕ್ಷಕ ಗುಂಪುಗಳಿಂದ ಕಿರುಕುಳ ತಡೆಯುವುದು ಇದರಲ್ಲಿ ಸೇರಿದೆ.
ಇದರ ಜತೆಗೆ ಆಲ್ ಗೋವಾ ಮುಸ್ಲಿಂ ಜಮಾಅತ್ ಅಸೋಸಿಯೇಶನ್ ಕೂಡಾ ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿದೆ.