ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿ | ಲಕ್ಷ್ಯ ಸೇನ್ ಕ್ವಾರ್ಟರ್ಫೈನಲ್ ಗೆ
ಪಿ.ವಿ. ಸಿಂಧೂ 2ನೇ ಸುತ್ತಿನಲ್ಲಿ ಹೊರಗೆ
ಲಕ್ಷ್ಯ ಸೇನ್ | Photo: NDTV
ಬರ್ಮಿಂಗ್ ಹ್ಯಾಮ್: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ, ಗುರುವಾರ ಭಾರತದ ಲಕ್ಷ್ಯ ಸೇನ್ ಡೆನ್ಮಾರ್ಕ್ ನ ಮೂರನೇ ವಿಶ್ವ ರ್ಯಾಂಕಿಂಗ್ನ ಆ್ಯಂಡರ್ಸ್ ಆ್ಯಂಟನ್ಸನ್ ರನ್ನು ಸೋಲಿಸಿ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಆದರೆ, ಮಹಿಳಾ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧೂ ಪರಾಭವಗೊಂಡಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ, 18ನೇ ವಿಶ್ವ ರ್ಯಾಂಕಿಂಗ್ ನ ಸೇನ್ ನಿರ್ಣಾಯಕ ಮೂರನೇ ಗೇಮ್ ನಲ್ಲಿ ಒಂದು ಹಂತದಲ್ಲಿ 2-8ರ ಹಿನ್ನಡೆಯಲ್ಲಿದ್ದರು. ಆದರೆ, ಅಂತಿಮವಾಗಿ ಅವರು ತನ್ನ ಎದುರಾಳಿಯನ್ನು 24-22, 11-21, 21-14 ಗೇಮ್ ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು, ಅವಳಿ ಒಲಿಂಪಿಕ್ ಪದಕ ವಿಜೇತೆ ಸಿಂಧೂ ವಿಶ್ವದ ನಂಬರ್ ವನ್ ಆಟಗಾರ್ತಿ ದಕ್ಷಿಣ ಕೊರಿಯದ ಆನ್ ಸೆ ಯಂಗ್ ವಿರುದ್ಧ ಉತ್ತಮ ಲಯದಲ್ಲಿರುವಂತೆ ಕಂಡರು. ಆದರೆ, ಹಲವು ತಪ್ಪುಗಳನ್ನು ಮಾಡಿದ ಅವರು ಅಂತಿಮವಾಗಿ 19-21, 11-21 ಗೇಮ್ ಗಳಿಂದ ಸೋಲನುಭವಿಸಿದರು.
ಇದು ಅದಮ್ಯ ಆನ್ ಸೆ ಯಂಗ್ ವಿರುದ್ಧ ಸಿಂಧೂರ ಸತತ ಏಳನೇ ಸೋಲಾಗಿದೆ.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಪ್ರಿಯಾಂಶು ರಾಜವತ್ ಇಂಡೋನೇಶ್ಯದ ಚಿಕೊ ಆರಾ ಡ್ವೈ ವರ್ಡೊಯೊ ವಿರುದ್ಧ 19-21, 21-11, 21-9 ಗೇಮ್ ಗಳಿಂದ ಸೋಲನುಭವಿಸಿದ್ದಾರೆ.
ಸಾತ್ವಿಕ್- ಚಿರಾಗ್ ಶೆಟ್ಟಿ ಜೋಡಿಗೆ ಜಯ
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜಯ ಗಳಿಸಿದ್ದಾರೆ. ಅವರು ಇಂಡೋನೇಶ್ಯದ ಮುಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸೆತ್ಯವಾನ್ ಜೋಡಿಯನ್ನು 21-18, 21-14 ಗೇಮ್ ಗಳಿಂದ ಸೋಲಿಸಿದ್ದಾರೆ.
ವಿಶ್ವದ ನಂಬರ್ ವನ್ ಪುರುಷ ಜೋಡಿಯಾಗಿರುವ ಚಿರಾಗ್ ಮತ್ತು ಸಾತ್ವಿಕ್ ಎರಡನೇ ಸುತ್ತಿನಲ್ಲಿ ಮುಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಬಗಸ್ ಮೌಲಾನಾ ಜೋಡಿಯನ್ನು ಎದುರಿಸಲಿದ್ದಾರೆ.
ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿಯಾಗುವ ನಿಟ್ಟಿನಲ್ಲಿ ಅವರು ಪ್ರಯತ್ನ ನಡೆಸಲಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ, ಭಾರತದ ತನಿಶಾ ಕ್ಯಾಸ್ಟ್ರೊ ಮತ್ತು ಅಶ್ವಿನಿ ಪೊನ್ನಪ್ಪ ಹಾಂಕಾಂಗ್ ನ ಯೊಂಗ್ ಎಂಗ ಮತ್ತು ಯೊಂಗ್ ಪುಯಿ ಲಾಮ್ ಜೋಡಿಯನ್ನು 21-13, 21-18 ಗೇಮ್ ಗಳಿಂದ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಅವರು ಚೀನಾದ ಝಾಂಗ್ ಶುಕ್ಸಿಯನ್ ಮತ್ತು ಝೆಂಗ್ ಯು ಜೋಡಿಯನ್ನು ಎದುರಿಸಲಿದ್ದಾರೆ.
ಆದರೆ, ಇನ್ನೊಂದು ಮಹಿಳಾ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ, ಭಾರತದ ರುತಪರ್ಣ ಪಾಂಡ ಮತ್ತು ಶ್ವೇತಪರ್ಣ ಪಾಂಡ ಜಪಾನ್ನ ರಿನ್ ಇವನಗ ಮತ್ತು ಕೈ ನಿಕನಿಶಿ ವಿರುದ್ಧ 9-21, 9-21 ಗೇಮ್ ಗಳಿಂದ ಸೋಲನುಭವಿಸಿದರು.
ತಪ್ಪುಗಳನ್ನು ಸರಿಪಡಿಸಿಕೊಂಡು ಬಲಿಷ್ಠವಾಗಿ ಹೊರಹೊಮ್ಮುತ್ತೇನೆ: ಸಿಂಧೂ
ನಾನು ಎಲ್ಲಿ ತಪ್ಪು ಮಾಡಿದ್ದೇನೆ ಎನ್ನುವುದನ್ನು ಪತ್ತೆಹಚ್ಚಿ ಅದನ್ನು ಸರಿಪಡಿಸಿಕೊಂಡು ಪುಟಿದೇಳುತ್ತೇನೆ ಎಂದು ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ ಹೇಳಿದ್ದಾರೆ.
ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಗುರುವಾರ ಪರಾಭವಗೊಂಡ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ನಾನು ಮೊದಲ ಗೇಮ್ ನಲ್ಲಿ ಉತ್ತಮವಾಗಿ ಆಡಿದೆ, ಆದರೆ ಎರಡನೇ ಗೇಮ್ ನಲ್ಲಿ ಅಗಾಧ ಮುನ್ನಡೆಯಲ್ಲಿದ್ದರೂ ಅನ್ಫೋರ್ಸ್ಡ್ ಎರರ್ಸ್ ಮೂಲಕ ಆ ಗೇಮನ್ನು ಕಳೆದುಕೊಂಡೆ ಎಂದು ಅವರು ಹೇಳಿದರು.
“ನಾನು ಇದಕ್ಕಿಂತಲೂ ಸ್ವಲ್ಪ ಹೆಚ್ಚಿನ ನಿರ್ವಹಣೆ ನೀಡಬೇಕಾಗಿತ್ತು ಎಂದು ಅನಿಸುತ್ತದೆ. ಮೊದಲ ಗೇಮ್ ಅತ್ಯುತ್ತಮವಾಗಿತ್ತು. ನಾನು ಎರಡು ಅಥವಾ ಮೂರು ಅಂಕಗಳನ್ನು ಮಾತ್ರ ಬಿಟ್ಟುಕೊಟ್ಟೆ. ಎರಡನೇ ಗೇಮ್ ನಲ್ಲಿ ದೊಡ್ಡ ಮುನ್ನಡೆ ಸಾಧಿಸಿದ್ದರೂ ತುಂಬಾ ಅನ್ಫೋರ್ಸ್ಡ್ ಎರರ್ಗಳನ್ನು ಮಾಡಿದೆ. ನನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಬಲಿಷ್ಠವಾಗಿ ವಾಪಸ್ ಬರುತ್ತೇನೆ'' ಎಂದು ಸಿಂಧೂ ಹೇಳಿದ್ದಾರೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ಹೇಳಿದೆ.