ಆಲ್ ಇಂಡಿಯಾ ರೇಡಿಯೋ, ದೂರದರ್ಶನದಲ್ಲಿ 64.58% ಖಾಲಿ ಹುದ್ದೆಗಳಿವೆ; ಸಚಿವಾಲಯದಿಂದ ಮಾಹಿತಿ
Photo | iStock
ಹೊಸದಿಲ್ಲಿ: ಆಲ್ ಇಂಡಿಯಾ ರೇಡಿಯೋ(AIR) ಮತ್ತು ದೂರದರ್ಶನ(ಡಿಡಿ)ದಲ್ಲಿ 2022-23ರ ಅವಧಿಯಲ್ಲಿ 3,186ರಷ್ಟು ಉದ್ಯೋಗಗಳು ಭರ್ತಿಯಾಗದೆ ಖಾಲಿಯಾಗಿತ್ತು. ಇದೀಗ ಖಾಲಿ ಹುದ್ದೆಗಳ ಸಂಖ್ಯೆ ಶೇಕಡಾ 64.58ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಂಸದೀಯ ಸಮಿತಿಗೆ ತಿಳಿಸಿದೆ.
AIR ಮತ್ತು DDಯ ಉದ್ಯೋಗಿಗಳ ಸಾಮರ್ಥ್ಯವು 45,791ಆಗಿದ್ದು, ಪ್ರಸ್ತುತ 16,219 ಜನರು ಕೆಲಸ ಮಾಡುತ್ತಿದ್ದು, 29,572 ಹುದ್ದೆಗಳು ಖಾಲಿ ಉಳಿದಿವೆ ಎಂದು ಸಚಿವಾಲಯ ತಿಳಿಸಿರುವುದಾಗಿ ಸಂವಹನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಂಸದೀಯ ಸ್ಥಾಯಿ ಸಮಿತಿ ಮಾಹಿತಿಯನ್ನು ನೀಡಿದೆ.
2022-23ರಲ್ಲಿ 45,791 ಮಂಜೂರಾದ ಹುದ್ದೆಗಳಲ್ಲಿ 19,405 ಜನರು AIR ಮತ್ತು DDಯಲ್ಲಿ ಕೆಲಸ ಮಾಡುತ್ತಿದ್ದು, 26,386 ಹುದ್ದೆಗಳು ಖಾಲಿ ಉಳಿದಿವೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಮಿತಿಯು ಹೇಳಿತ್ತು. ಪ್ರಸಾರ ಭಾರತಿಯಲ್ಲಿನ ನೇಮಕಾತಿ ಸಮಸ್ಯೆಗಳ ಬಗ್ಗೆ ವಿವರವಾಗಿ ವಿವರಿಸಿದ ಸಚಿವಾಲಯವು, ಅಧಿಕಾರಿಗಳು ನಿವೃತ್ತರಾಗುತ್ತಿದ್ದಾರೆ ಮತ್ತು ಯಾವುದೇ ಹೊಸ ನೇಮಕಾತಿ ನಡೆಯದ ಕಾರಣ ಯುವ ಪ್ರತಿಭೆಗಳು ಕಡಿಮೆಯಾಗಿದ್ದಾರೆ ಎಂದು ಹೇಳಿದೆ.
ಆಲ್ ಇಂಡಿಯಾ ರೇಡಿಯೋ(AIR) ವನ್ನು ಮಾತ್ರ ನೀವು ತೆಗೆದುಕೊಂಡು ನೋಡಿದರೆ 26,129 ಮಂಜೂರಾದ ಹುದ್ದೆಗಳಲ್ಲಿ ಉದ್ಯೋಗಿಗಳ ಸಂಖ್ಯೆಯು 12,613ರಿಂದ 10,265ಕ್ಕೆ ಇಳಿದಿದೆ. ಅಂದರೆ, ಪ್ರಸ್ತುತ 15,864 ಹುದ್ದೆಗಳು ಖಾಲಿ ಉಳಿದಿದೆ. ದೂರದರ್ಶನದಲ್ಲಿ 2022-23ರಲ್ಲಿ 7,242 ಉದ್ಯೋಗಿಗಳಿದ್ದರು, ಪ್ರಸ್ತುತ 5,954 ಉದ್ಯೋಗಿಗಳು ಮಾತ್ರ ಇದ್ದಾರೆ. ದೂರದರ್ಶನಕ್ಕೆ 19,662 ಮಂಜೂರಾದ ಹುದ್ದೆಗಳಿದ್ದು 13,708 ಹುದ್ದೆಗಳು ಖಾಲಿಯಿದೆ.
ಸಿಬ್ಬಂದಿ ಕೊರತೆ ಸಮಸ್ಯೆ ದೀರ್ಘಕಾಲದ ಸಮಸ್ಯೆಯಾಗಿದೆ ಎಂದು ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ಹೇಳಿದ್ದಾರೆ. 1997ರಲ್ಲಿ ಪ್ರಸಾರ ಭಾರತಿ ಪ್ರಾರಂಭವಾದಾಗ 46,000 ಹುದ್ದೆಗಳಲ್ಲಿ ಮೂರನೇ ಎರಡರಷ್ಟು ಭರ್ತಿಯಾಗಿತ್ತು. ಆದರೆ, ಜನರು ನಿವೃತ್ತಿಯಾದಂತೆ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಯಿತು ಎಂದು ಹೇಳಿದ್ದಾರೆ.