ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ, ನಾವು ಒಗ್ಗಟ್ಟಿನಿಂದ ಇದ್ದೇವೆ: ಜೆಡಿಯುನಲ್ಲಿ ಗೊಂದಲ ವದಂತಿಗಳ ಕುರಿತು ನಿತೀಶ್ ಕುಮಾರ್ ಸ್ಪಷ್ಟನೆ
ನಿತೀಶ್ ಕುಮಾರ್ | Photo: PTI
ಪಾಟ್ನಾ: ಜೆಡಿಯುನಲ್ಲಿ ಗೊಂದಲದ ವದಂತಿಗಳನ್ನು ಸೋಮವಾರ ತಳ್ಳಿಹಾಕಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ತನ್ನ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಮತ್ತು ರಾಜ್ಯದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಟ್ಟಾಗಿ ಶ್ರಮಿಸುತ್ತಿದ್ದಾರೆ ಎಂದು ಒತ್ತಿ ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 99ನೇ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಲು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್, ಕಳೆದ ವಾರ ದಿಲ್ಲಿಯಲ್ಲಿ ನಡೆದಿದ್ದ ಇಂಡಿಯಾ ಮೈತ್ರಿಕೂಟದ ಸಭೆಯ ಫಲಿತಾಂಶದಿಂದ ತಾನು ಅಸಮಾಧಾನಗೊಂಡಿದ್ದೇನೆ ಎನ್ನುವುದನ್ನು ನಿರಾಕರಿಸಿದರು. “ನಾನು ಸ್ವಂತಕ್ಕಾಗಿ ಯಾವುದೇ ಬಯಕೆಯನ್ನು ಹೊಂದಿಲ್ಲ ಎನ್ನುವುದನ್ನು ಆರಂಭದಿಂದಲೇ ಹೇಳುತ್ತ ಬಂದಿದ್ದೇನೆ. 2024ರ ಲೋಕಸಭಾ ಚುನಾವಣೆಗೆ ಮೊದಲು ಗರಿಷ್ಠ ಸಂಖ್ಯೆಯ ಪಕ್ಷಗಳನ್ನು ಒಗ್ಗೂಡಿಸುವುದು ನನ್ನ ಏಕೈಕ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ಮಾತ್ರ ನಾನು ಕೆಲಸ ಮಾಡುತ್ತಿದ್ದೇನೆ ಎಂದರು. ಸ್ಥಾನ ಹಂಚಿಕೆ ವ್ಯವಸ್ಥೆ ಶೀಘ್ರವೇ ಪೂರ್ಣಗೊಳ್ಳಲಿದೆ” ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಮಾಧ್ಯಮಗಳ ಒಂದು ವರ್ಗವು ಇತ್ತೀಚಿಗೆ ಬಿಜೆಪಿ ನಾಯಕರನ್ನು ಉಲ್ಲೇಖಿಸಿ ವರದಿ ಮಾಡಿರುವಂತೆ ಜೆಡಿಯುನಲ್ಲಿ ಗೊಂದಲದ ವದಂತಿಗಳ ಕುರಿತು ಪ್ರಶ್ನೆಗೆ ನಿತೀಶ್, ‘ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಎಲ್ಲವೂ ಚೆನ್ನಾಗಿದೆ. ನಮ್ಮ ಬಗ್ಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ ಎನ್ನುವುದಕ್ಕೆ ನಾನು ಗಮನ ನೀಡುವುದಿಲ್ಲ. ಅವರಿಗೆ ಬೇಕಾದ್ದನ್ನು ಅವರು ಹೇಳಿಕೊಳ್ಳಲಿ,ಅದಕ್ಕೇನೂ ಬೆಲೆಯಿಲ್ಲ. ನಾವು ನಮ್ಮ ರಾಜ್ಯದ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದೇವೆ. ಅದಕ್ಕಾಗಿ ನಾವು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ ’ಎಂದು ಉತ್ತರಿಸಿದರು.
“ನಾವು ಬಿಹಾರದ ಯುವಜನರಿಗಾಗಿ 10 ಲಕ್ಷ ಸರಕಾರಿ ಉದ್ಯೋಗಗಳನ್ನು ಘೋಷಿಸಿದ್ದೆವು. ಈ ಗುರಿಯನ್ನು ನಾವು ಶೀಘ್ರವೇ ಸಾಧಿಸಲಿದ್ದೇವೆ. ನಮ್ಮ ಸರಕಾರವು ಈಗಾಗಲೇ ಐದು ಲಕ್ಷ ಸರಕಾರಿ ಉದ್ಯೋಗಗಳನ್ನು ಒದಗಿಸಿದೆ” ಎಂದೂ ಅವರು ಹೇಳಿದರು.