ರಕ್ಷಣೆ ಒದಗಿಸುವಂತೆ ಕೋರಿದ 8 ಅಂತರ್ಧರ್ಮೀಯ ಜೋಡಿಯ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
ವಿವಾಹವು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿಗೆ ಅನುಸಾರವಾಗಿಲ್ಲ ಎಂದ ನ್ಯಾಯಾಲಯ
ಅಲಹಾಬಾದ್ ಹೈಕೋರ್ಟ್ (PTI)
ಪ್ರಯಾಗ್ರಾಜ್: ತಮಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಎಂಟು ಅಂತರ ಧರ್ಮೀಯ ಜೋಡಿ ಸಲ್ಲಿಸಿದ್ದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇವರ ವಿವಾಹ ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿಗೆ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಈ ಜೋಡಿಯ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.
ತಪ್ಪಾಗಿ ಬಿಂಬಿಸಿಕೊಂಡು, ಬಲವಂತದಿಂದ, ವಂಚನೆಯಿಂದ, ತರ್ಕಸಮ್ಮತವಲ್ಲದ ಒತ್ತಡದಿಂದ, ಬಲಾತ್ಕಾರದಿಂದ ಧಾರ್ಮಿಕ ಮತಾಂತರ ಮಾಡುವುದನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರವು 2021 ರಲ್ಲಿ ಕಾನೂನುಬಾಹಿರ ಮತಾಂತರ ತಡೆ ಕಾಯ್ದೆಯನ್ನು ಅಂಗೀಕರಿಸಿತ್ತು
ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಹಾಗೂ ಸೂಕ್ತ ರಕ್ಷಣೆ ಒದಗಿಸುವಂತೆ ಸೂಚಿಸಬೇಕು ಎಂದು ಕೋರಿ ಈ ಜೋಡಿಗಳು ಪ್ರತ್ಯೇಕವಾಗಿ ಹೈಕೋರ್ಟ್ನ ಮೊರೆ ಹೋಗಿದ್ದರು. ಜನವರಿ 10 ರಿಂದ 16ರ ನಡುವೆ ಈ ಎಲ್ಲ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಅರ್ಜಿಗಳನ್ನು ತಿರಸ್ಕರಿಸುವ ವೇಳೆ, ಈ ಅಂತರಧರ್ಮೀಯ ವಿವಾಹಗಳು ಮತಾಂತರ ವಿರೋಧಿ ಕಾನೂನನ್ನು ಅನುಸರಿಸದೇ ಇರುವುದರಿಂದ ಕಾನೂನಾತ್ಮಕ ನಿಬಂಧನೆಗಳಿಗೆ ಅನುಸಾರವಾಗಿಲ್ಲ ಎಂದು ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಅವರು ಹೇಳಿದ್ದಾರೆ.
ಈ ಎಂಟು ಪ್ರಕರಣಗಳ ಪೈಕಿ ಐದು ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ವಿವಾಹವಾಗಿದ್ದರೆ, ಉಳಿದ ಮೂರು ಪ್ರಕರಣಗಳಲ್ಲಿ ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ವಿವಾಹವಾಗಿದ್ದಾರೆ. ನ್ಯಾಯಾಲಯ ಈ ಅರ್ಜಿದಾರರ ಧರ್ಮವನ್ನು ಆದೇಶದಲ್ಲಿ ಉಲ್ಲೇಖಿಸಿದೆ.