‘ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ’ ಎಂಬ ಅಲಹಾಬಾದ್ ಹೈಕೋರ್ಟ್ ಹೇಳಿಕೆ ಅಳಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ: ಸಮಾವೇಶಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸದಿದ್ದರೆ ಮುಂದೊಂದು ದಿನ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ ಎಂಬ ಅಲಹಾಬಾದ್ ಉಚ್ಚ ನ್ಯಾಯಾಲಯದ ಹೇಳಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅಳಿಸಿಹಾಕಿದೆ.
ಜು.1ರಂದು ಉಚ್ಚ ನ್ಯಾಯಾಲಯದ ನ್ಯಾ.ರೋಹಿತ ರಂಜನ ಅಗರವಾಲ್ ಅವರು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ,2021ರಡಿ ಬಂಧಿತ ವ್ಯಕ್ತಿಯ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದ ಸಂದರ್ಭ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಇಂತಹ ಹೇಳಿಕೆಗಳನ್ನು ತಿರಸ್ಕರಿಸಿರುವ ತಜ್ಞರು,ಮುಸ್ಲಿಮರ ಬೆಳವಣಿಗೆ ದರವು ಹಿಂದುಗಳಿಗಿಂತ ಹೆಚ್ಚಿದ್ದರೂ ಮುಸ್ಲಿಮರಲ್ಲಿ ಫಲವತ್ತತೆ ದರವು ಕುಸಿಯುತ್ತಿರುವುದರಿಂದ ಅದು ಸ್ಥಿರವಾಗಿ ಇಳಿಕೆಯಾಗುತ್ತಿದೆ ಎಂದು ಬೆಟ್ಟು ಮಾಡಿದ್ದಾರೆ. ಇದರರ್ಥ ಹಾಲಿ ಪ್ರವೃತ್ತಿಗಳು ಮುಂದುವರಿದರೆ ಉಭಯ ಸಮುದಾಯಗಳ ಬೆಳವಣಿಗೆ ದರಗಳು ಒಂದೇ ಆಗುತ್ತವೆ ಮತ್ತು ಅವುಗಳ ಹಾಲಿ ಜನಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಾಗುವುದಿಲ್ಲ.
ಉಚ್ಚ ನ್ಯಾಯಾಲಯವು ವ್ಯಕ್ತಪಡಿಸಿರುವ ಸಾಮಾನ್ಯ ಅಭಿಪ್ರಾಯಗಳು ಪ್ರಸ್ತುತ ಪ್ರಕರಣದಲ್ಲಿಯ ವಾಸ್ತವಾಂಶಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಿರಲಿಲ್ಲ ಮತ್ತು ಅದರ ವಿಲೇವಾರಿಗೆ ಅಗತ್ಯವಾಗಿರಲಿಲ್ಲ ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಮನೋಜ ಮಿಶ್ರಾ ಅವರ ಪೀಠವು ಹೇಳಿತು.
ಆದ್ದರಿಂದ ಈ ಅಭಿಪ್ರಾಯಗಳನ್ನು ಇತರ ಯಾವುದೇ ಪ್ರಕರಣದಲ್ಲಿ ಅಥವಾ ಉಚ್ಚ ನ್ಯಾಯಾಲಯ ಅಥವಾ ಇತರ ಯಾವುದೇ ನ್ಯಾಯಾಲಯದ ಕಲಾಪದಲ್ಲಿ ಉಲ್ಲೇಖಿಸುವಂತಿಲ್ಲ ಎಂದು ಹೇಳಿದ ಪೀಠವು,ಪ್ರಕರಣದಲ್ಲಿ ಬಂಧಿತ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿತು.