2021ರ ಲಖಿಂಪುರ ಖೇರಿ ಹಿಂಸಾಚಾರ: ಅಲಹಾಬಾದ್ ಹೈಕೋರ್ಟ್ನಿಂದ 12 ಆರೋಪಿಗಳಿಗೆ ಜಾಮೀನು
ಅಲಹಾಬಾದ್ ಹೈಕೋರ್ಟ್ | PC : PTI
ಅಲಹಾಬಾದ್: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಅ.3, 2021ರಂದು ನಡೆದಿದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 12 ಆರೋಪಿಗಳಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಜಾಮೀನು ಕೋರಿಕೆಯು ಮುಖ್ಯ ಆರೋಪಿಯಾಗಿರುವ, ಕೇಂದ್ರದ ಮಾಜಿ ಸಚಿವ ಅಜಯ ಮಿಶ್ರಾ ತೇನಿಯವರ ಪುತ್ರ ಆಶಿಷ್ ಮಿಶ್ರಾಗಿಂತ ಹೆಚ್ಚಿನ ಸಮರ್ಥನೆಯನ್ನು ಹೊಂದಿದೆ ಎಂದು ನ್ಯಾಯಾಲಯವು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಹೇಳಿತು. 2023,ಜ.25ರಂದು ಮಿಶ್ರಾಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ಸವೋಚ್ಚ ನ್ಯಾಯಾಲಯವು ಜು.22ರಂದು ಅದನ್ನು ನಿಯಮಿತ ಜಾಮೀನು ಆಗಿ ಪರಿವರ್ತಿಸಿತ್ತು.
ಲಖಿಂಪುರ ಖೇರಿಯಲ್ಲಿ ಈಗ ರದ್ದುಗೊಂಡಿರುವ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮಿಶ್ರಾ ತನ್ನ ವಾಹನವನ್ನು ಪ್ರತಿಭಟನಾಕಾರರ ಗುಂಪಿನ ಮೇಲೆ ನುಗ್ಗಿಸಿದ್ದ ಎಂದು ರೈತರು ಆರೋಪಿಸಿದ್ದರು. ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದರು.
ಅಂಕಿತ ದಾಸ್,ನಂದನ ಸಿಂಗ್ ಬಿಷ್ಟ್,ಲತೀಫ್ ಅಲಿಯಾಸ್ ಕಾಲೆ,ಸತ್ಯಂ ತ್ರಿಪಾಠಿ ಅಲಿಯಾಸ್ ಸತ್ಯಪ್ರಕಾಶ ತ್ರಿಪಾಠಿ,ಶೇಖರ ಭಾರ್ತಿ,ಧರ್ಮೇಂದ್ರ ಸಿಂಗ್ ಬಂಜಾರಾ,ಆಶಿಷ್ ಪಾಂಡೆ,ರಿಂಕು ರಾಣಾ,ಉಲ್ಲಾಸ್ ಕುಮಾರ ತ್ರಿವೇದಿ ಅಲಿಯಾಸ್ ಮೋಹಿತ ತ್ರಿವೇದಿ,ಲವಕುಶ,ಸುಮಿತ ಜೈಸ್ವಾಲ್ ಮತ್ತು ಶಿಶುಪಾಲ ಅವರು ಜಾಮೀನು ಭಾಗ್ಯವನ್ನು ಪಡೆದಿರುವ ಆರೋಪಿಗಳಾಗಿದ್ದಾರೆ.
ವಿಚಾರಣೆಯು ಆಮೆಗತಿಯಲ್ಲಿ ಸಾಗುತ್ತಿದೆ ಮತ್ತು 114 ಸಾಕ್ಷಿಗಳ ಪೈಕಿ ಈ ವರೆಗೆ ಕೇವಲ ಏಳು ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.