ಮುಸ್ಲಿಂ ವಿರೋಧಿ ಹೇಳಿಕೆ | ನ್ಯಾಯಾಧೀಶರ ಕುರಿತು ಹೊಸ ವರದಿ ಸಲ್ಲಿಸಲು ಅಲಹಾಬಾದ್ ಹೈಕೋರ್ಟ್ಗೆ ಸಿಜೆಐ ಸೂಚನೆ
ಅಲಹಾಬಾದ್ ಹೈಕೋರ್ಟ್ | PC : PTI
ಹೊಸದಿಲ್ಲಿ: ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಡಿಸೆಂಬರ್ನಲ್ಲಿ ಮುಸ್ಲಿಂ ವಿರೋಧಿ ಹೇಳಿಕೆ ನೀಡಿರುವ ಕುರಿತು ಹೊಸ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಲಹಾಬಾದ್ ಉಚ್ಛ ನ್ಯಾಯಾಲಯಕ್ಕೆ ಸೂಚಿಸಿದೆ.
ವಿಶ್ವ ಹಿಂದೂ ಪರಿಷತ್ ಡಿಸೆಂಬರ್ 6ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿದ ಮೂರು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಭಾರತ ಬಹುಸಂಖ್ಯಾತ ಹಿಂದೂಗಳ ಇಚ್ಚೆಯಂತೆ ನಡೆಯುತ್ತದೆ ಎಂದು ಯಾದವ್ ಅವರು ಹೇಳಿದ್ದರು. ಸುನ್ನತಿಗೆ ಒಳಗಾಗುವ ಮುಸ್ಲಿಮರ ಕುರಿತು ಅವರು ಕೋಮು ನಿಂದನೆಯ ಪದವನ್ನು ಉಲ್ಲೇಖಿಸಿದ್ದರು. ಅಲ್ಲದೆ, ಮುಸ್ಲಿಂ ಸಮುದಾಯ ದೇಶಕ್ಕೆ ಅಪಾಯಕಾರಿ ಎಂದು ಬಣ್ಣಿಸಿದ್ದರು.
ಅವರು ದೇಶ ಪ್ರಗತಿ ಹೊಂದುವುದನ್ನು ಬಯಸದ ಜನರು. ನಾವು ಅವರ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಹೇಳಿದ್ದರು. ಎಲ್ಲಾ ನಾಗರಿಕರ ವಿವಾಹ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಅನ್ನು ನಿರ್ವಹಿಸುವ ಸಮಾನ ಕಾನೂನಾದ ಏಕರೂಪದ ನಾಗರಿಕ ಸಂಹಿತೆಯನ್ನು ಭಾರತ ಶೀಘ್ರದಲ್ಲಿ ಅಂಗೀಕರಿಸಲಿದೆ ಎಂದು ಅವರು ಹೇಳಿದ್ದರು.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಯಾದವ್ ಅವರು ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ನ ಕೊಲೀಜಿಯಂ ಮುಂದೆ ಡಿಸೆಂಬರ್ 17ರಂದು ಹಾಜರಾಗಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಕೊಲೀಜಿಯಂ ಯಾದವ್ ಅವರಿಗೆ ಸೂಚಿಸಿತ್ತು. ಆದರೆ, ಯಾದವ್ ಕ್ಷಮೆ ಅಥವಾ ವಿವರಣೆಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿಲ್ಲ.
ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅರುಣ್ ಬನ್ಸಾರಿ ಅವರಿಂದ ಹೊಸ ವರದಿ ಕೋರುವ ಖನ್ನಾ ಅವರ ನಿರ್ಧಾರ ಯಾದವ್ ವಿರುದ್ಧದ ದುರ್ನಡತೆ ಆರೋಪದ ಕುರಿತಂತೆ ಆಂತರಿಕ ತನಿಖೆಯನ್ನು ಪ್ರಾರಂಭಿಸುವಲ್ಲಿನ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ.