ಮುಹಮ್ಮದ್ ಝುಬೈರ್ ರನ್ನು ಬಂಧಿಸದಂತೆ ತಡೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್

ಮುಹಮ್ಮದ್ ಝುಬೈರ್
ಹೊಸದಿಲ್ಲಿ: ಯತಿ ನರಸಿಂಹಾನಂದ್ ವಿರುದ್ಧದ ಪೋಸ್ಟ್ ಗೆ ಸಂಬಂಧಿಸಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರನ್ನು ಫೆಬ್ರವರಿ 17ರವರೆಗೆ ಬಂಧಿಸದಂತೆ ಅಲಹಾಬಾದ್ ಹೈಕೋರ್ಟ್ ತಡೆಯನ್ನು ವಿಸ್ತರಿಸಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.
ಯತಿ ನರಸಿಂಹಾನಂದ್ ಅವರ ಸಹಚರರ ದೂರಿನ ಮೇರೆಗೆ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಝುಬೈರ್ ವಿರುದ್ಧ ಅಕ್ಟೋಬರ್ 2024ರಲ್ಲಿ ಗಾಝಿಯಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.
ಎಫ್ ಐಆರ್ ಪ್ರಶ್ನಿಸಿ ಝುಬೈರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಡಿಸೆಂಬರ್ 20ರಂದು ಗಂಭೀರ ಪ್ರಕರಣದ ಅಪರಾಧಿ ಅಲ್ಲ ಎಂದು ಮೌಖಿಕವಾಗಿ ಗಮನಿಸಿದ ಹೈಕೋರ್ಟ್ ಜನವರಿ 6ರವರೆಗೆ ಅವರ ಬಂಧನಕ್ಕೆ ತಡೆ ನೀಡಿತ್ತು.
ಯತಿ ನರಸಿಂಹಾನಂದ ಸರಸ್ವತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ. ಉದಿತಾ ತ್ಯಾಗಿ ಮುಹಮ್ಮದ್ ಝುಬೈರ್ ವಿರುದ್ಧ ದೂರು ದಾಖಲಿಸಿದ್ದರು.