ಜ.27ರವರೆಗೆ ಮುಹಮ್ಮದ್ ಝುಬೈರ್ ರನ್ನು ಬಂಧಿಸದಂತೆ ತಡೆಯಾಜ್ಞೆ ವಿಸ್ತರಿಸಿದ ಅಲಹಾಬಾದ್ ಹೈಕೋರ್ಟ್
ಮುಹಮ್ಮದ್ ಝುಬೈರ್ (Photo: Twitter)
ಹೊಸದಿಲ್ಲಿ : ಯತಿ ನರಸಿಂಹಾನಂದ ದ್ವೇಷ ಭಾಷಣದ ವೀಡಿಯೋ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ಬಂಧನಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಜನವರಿ 27ರವರೆಗೆ ಅಲಹಾಬಾದ್ ಹೈಕೋರ್ಟ್ ವಿಸ್ತರಿಸಿದೆ.
ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಶ್ರೀವಾಸ್ತವ ಅವರ ಪೀಠವು, ಝುಬೈರ್ ಅವರ ವಕೀಲರು ಸಲ್ಲಿಸಿದ ಅಸಮರ್ಪಕ ಹೇಳಿಕೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದ್ದರಿಂದ ಜಾಮೀನನ್ನು ವಿಸ್ತರಿಸಿದೆ.
ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಝುಬೈರ್ ವಿರುದ್ಧ ಯತಿ ನರಸಿಂಹಾನಂದ್ ಅವರ ಸಹಚರರ ದೂರಿನ ನಂತರ ಗಾಝಿಯಾಬಾದ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು. ಎಫ್ಐಆರ್ ಪ್ರಶ್ನಿಸಿ ಝುಬೈರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಡಿಸೆಂಬರ್ 20ರಂದು ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜನವರಿ 6ರವರೆಗೆ ಅವರ ಬಂಧನಕ್ಕೆ ತಡೆ ನೀಡಿತ್ತು.
ದಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನೀಡಿರುವ ಅವಹೇಳನಾಕಾರಿ ಹೇಳಿಕೆಯ ವೀಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದ ಮುಹಮ್ಮದ್ ಝುಬೈರ್ ಉತ್ತರ ಪ್ರದೇಶದ ಪೊಲೀಸರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದರು. ಈ ಬಗ್ಗೆ ಯತಿ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದರು. ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಅಕ್ಟೋಬರ್ 3ರಂದು ಝುಬೈರ್ ಅವರು ನರಸಿಂಹಾನಂದ ಅವರ ಹಳೆಯ ಕಾರ್ಯಕ್ರಮದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಯತಿ ನರಸಿಂಹಾನಂದ ಅವರ ಸಹಚರರು ಪೊಲೀಸರಿಗೆ ದೂರು ನೀಡಿದ್ದರು.