ನ್ಯೂಸ್ ಕ್ಲಿಕ್ ಎಫ್ಐಆರ್ ನಲ್ಲಿ ರೈತರ ವಿರುದ್ಧ ಆರೋಪ: ಸಂಯುಕ್ತ ಕಿಸಾನ್ ಮೋರ್ಚಾ ಖಂಡನೆ
Photo: newsclick.com
ಹೊಸದಿಲ್ಲಿ: ಭಾರತದ ಸಮುದಾಯದ ಬದುಕಿಗೆ ಅಗತ್ಯವಾದ ಸೇವೆ ಹಾಗೂ ಪೂರೈಕೆಗಳಿಗೆ ಅಡ್ಡಿಪಡಿಸಲು ರೈತ ಪ್ರತಿಭಟನೆ ಆಯೋಜಿಸಲಾಗಿತ್ತು ಎಂದು ‘ನ್ಯೂಸ್ ಕ್ಲಿಕ್’ನ ವಿರುದ್ಧ ದಾಖಲಿಸಲಾದ ಎಫ್ಐಆರ್ ನಲ್ಲಿ ಮಾಡಲಾದ ಆರೋಪ ಸುಳ್ಳು ಹಾಗೂ ದುಷ್ಟತನದಿಂದ ಕೂಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರವಿವಾರ ಹೇಳಿದೆ.
ಆನ್ಲೈನ್ ಸುದ್ದಿ ಪೋರ್ಟಲ್ ‘ನ್ಯೂಸ್ ಕ್ಲಿಕ್’ ಹಾಗೂ ಅದರೊಂದಿಗೆ ಸಂಬಂಧ ಹೊಂದಿದ್ದ ಪತ್ರಕರ್ತರ ವಿರುದ್ಧ ದಿಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್ ಅನ್ನು ಸಂಯುಕ್ತ ಕಿಸಾನ್ ಮೋರ್ಚಾ ಖಂಡಿಸಿದೆ. ರೈತ ಹೋರಾಟದ ವಿರುದ್ಧ ಎಫ್ಐಆರ್ ನಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ಮೋರ್ಚಾ ತನ್ನ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದೆ. ‘ನ್ಯೂಸ್ ಕ್ಲಿಕ್’ ಎಫ್ಐಆರ್ ಮೂಲಕ ರೈತ ಚಳುವಳಿಯ ವಿರುದ್ಧ ಮರು ದಾಳಿ ನಡೆಸಿರುವುದಕ್ಕೆ ಕೇಂದ್ರ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಅದು ಘೋಷಿಸಿದೆ.
13 ತಿಂಗಳ ದೀರ್ಘ ಕಾಲ ನಡೆದ ರೈತ ಹೋರಾಟ ಹಾನಿ ಮತ್ತು ಸೊತ್ತು ಹಾನಿ ಮಾಡಲು ಕುಮ್ಮಕ್ಕು ನೀಡಿದೆ, ಭಾರತೀಯ ಆರ್ಥಿಕತೆಗೆ ಭಾರೀ ನಷ್ಟ ಉಂಟು ಮಾಡಿದೆ, ಅಕ್ರಮ ವಿದೇಶಿ ನಿಧಿಯ ಮೂಲಕ ಆಂತರಿಕ ಕಾನೂನು ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ಬಿಜೆಪಿ ಸರಕಾರದ ರೈತ ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ನಡೆದ ರೈತರ ಹೋರಾಟ ಶಾಂತಿಯುತವಾಗಿತ್ತು. ಯಾವುದೇ ಪೂರೈಕೆಗೆ ರೈತರಿಂದ ಅಡ್ಡಿ ಉಂಟಾಗಿಲ್ಲ. ರೈತರಿಂದ ಯಾವುದೇ ಸೊತ್ತಿಗೆ ಹಾನಿ ಉಂಟಾಗಿಲ್ಲ.
ರೈತರಿಂದ ಆರ್ಥಿಕತೆಗೆ ಯಾವುದೇ ನಷ್ಟ ಉಂಟಾಗಿಲ್ಲ. ರೈತರು ಕಾನೂನು ಹಾಗೂ ಸುವ್ಯವಸ್ಥೆಗೆ ಯಾವುದೇ ಅಡ್ಡಿ ಉಂಟು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ದಿಲ್ಲಿ ತಲುಪುವ ರೈತರ ಪ್ರಜಾಸತ್ತಾತ್ಮಕ ಹಕ್ಕನ್ನು ತಂತಿ ಬೇಲಿ ಅಳವಡಿಸುವ, ಜಲಪಿರಂಗಿ ಬಳಸುವ, ಲಾಠಿ ಚಾರ್ಜ್ ನಡೆಸುವ ಹಾಗೂ ರಸ್ತೆಗಳನ್ನು ಅಗೆದು ಹಾಕುವ ಮೂಲಕ ಬಿಜೆಪಿ ಸರಕಾರ ಹಿಂಸಾತ್ಮಕವಾಗಿ ತಡೆಯಿತು. ಇದು ದೇಶದ ಜನರಿಗೆ ಹಾಗೂ ರೈತರಿಗೆ ಕೇಂದ್ರ ಸರಕಾರ ಉಂಟು ಮಾಡಿದ ಅನಾನುಕೂಲತೆ ಎಂದು ಮೋರ್ಚಾ ಹೇಳಿದೆ.