ಬಿಜೆಪಿಯಿಂದ ಶಾಸಕರ ಖರೀದಿ ಆರೋಪ ; ಅತಿಶಿಗೆ ದಿಲ್ಲಿ ಪೊಲೀಸ್ ನೋಟಿಸ್
ಅತಿಶಿ | Photo: PTI
ಹೊಸದಿಲ್ಲಿ : ಆಮ್ ಆದ್ಮಿ ಪಕ್ಷ (ಎಎಪಿ)ದ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸ್ನ ಅಪರಾಧ ದಳ ದಿಲ್ಲಿ ಸಚಿವೆ ಅತಿಶಿ ಅವರ ಇಲ್ಲಿನ ನಿವಾಸಕ್ಕೆ ರವಿವಾರ ಭೇಟಿ ನೀಡಿದೆ ಹಾಗೂ ಅವರಿಗೆ ನೋಟಿಸು ಜಾರಿ ಮಾಡಿದೆ.
ಅಪರಾಧ ದಳದ ತಂಡ ಅತಿಶಿ ಅವರ ನಿವಾಸಕ್ಕೆ ರವಿವಾರ ಅಪರಾಹ್ನ 12.55ಕ್ಕೆ ಎರಡನೇ ಬಾರಿ ಭೇಟಿ ನೀಡಿದ ಸಂದರ್ಭ ಅವರ ಸಿಬ್ಬಂದಿ ನೋಟಿಸು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ವಿರುದ್ಧ ಮಾಡಲಾದ ಶಾಸಕರ ಖರೀದಿ ಆರೋಪದ ಕುರಿತು ಮಾಹಿತಿ ನೀಡುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅತಿಶಿ ಅವರಿಗೆ ಅಪರಾಧ ನೋಟಿಸಿನಲ್ಲಿ ತಿಳಿಸಿದೆ. ನೋಟಿಸಿಗೆ ಫೆಬ್ರವರಿ 5 ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಅತಿಶಿ ಅವರಿಗೆ ಸೂಚಿಸಲಾಗಿದೆ.
ಆಮ್ ಆದ್ಮಿ ಪಕ್ಷದ 7 ಮಂದಿ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪದ ತನಿಖೆಗೆ ಸಂಬಂಧಿಸಿ ಮೂರು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಅಪರಾಧ ದಳದ ಅಧಿಕಾರಿಗಳು ನೋಟಿಸು ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಇಂದು ಬೆಳಗ್ಗೆ ಪೊಲೀಸ್ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದರು. ಆದರೆ, ಅವರು ಇರಲಿಲ್ಲ. ಬಳಿಕ ಮತ್ತೆ ತೆರಳಿದಾಗ ಅವರು ಇದ್ದರು. ನೋಟಿಸು ಹಸ್ತಾಂತರಿಸಲಾಯಿತು.
ನೋಟಿಸು ಸ್ವೀಕರಿಸುವಂತೆ ಅತಿಶಿ ಅವರು ತನ್ನ ಕಚೇರಿ ಸಿಬ್ಬಂದಿಗೆ ನಿರ್ದೇಶನ ನೀಡಿದ್ದರು ಎಂದು ಆಪ್ ಮೂಲಗಳು ತಿಳಿಸಿವೆ.
ನೋಟಿಸಿಗೆ ಪ್ರತಿಕ್ರಿಯಿಸಿದ ಆಪ್ ನಾಯಕ ಜಾಸ್ಮಿನ್ ಶಾ, ನೋಟಿಸು ಸಮನ್ಸ್ ಅಥವಾ ಎಫ್ಐರ್ ಅಥವಾ ಐಪಿಸಿ/ಸಿ ಆರ್ ಪಿ ಸಿ ಯ ಕುರಿತ ಯಾವುದೇ ವಿಚಾರ ಒಳಗೊಂಡಿಲ್ಲ. ಇದು ಕೇವಲ ಬಿಳಿ ಕಾಗದದ ಪತ್ರ ಎಂದು ಹೇಳಿದ್ದಾರೆ.