ನೆರೆಹೊರೆಯವರ ಮರ ಕಡಿದ ಆರೋಪ: ಸಮಾಜವಾದಿ ಪಕ್ಷದ ನಾಯಕನ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ.| Photo: PTI
ಹರಿದ್ವಾರ: ನೆರೆಹೊರೆಯವರ ಜಮೀನಿನಿಂದ ಮರಗಳನ್ನು ಕದ್ದ ಆರೋಪದಡಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮಾಜಿ ಸಂಸದ ಕಾದಿರ್ ರಾಣಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಮುಝಾಫ್ಫರ್ ನಗರ ಮಾಜಿ ಸಂಸದರ ವಿರುದ್ಧ ನೆರೆಹೊರೆಯವರ ಜಮೀನಿನ ಒಂದು ಭಾಗವನ್ನು ಒತ್ತುವರಿ ಮಾಡಿ, ಆ ಜಾಗಕ್ಕೆ ತಮ್ಮ ಕಾರ್ಖಾನೆಯಿಂದ ಹೊರ ಬರುವ ರಾಸಾಯನಿಕ ದ್ರವ್ಯಗಳು ಹಾಗೂ ತ್ಯಾಜ್ಯಗಳನ್ನು ಹರಿಸಲಾಗಿದೆ ಎಂಬ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗ್ಲೌರ್ ಠಾಣೆಯ ವೃತ್ತಾಧಿಕಾರಿ ಬಹದ್ದೂರ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಕಾದಿರ್ ರಾಣಾ ಅವರ ಕಾರ್ಖಾನೆಯನ್ನು ಮಂಗ್ಲೌರ್ ನ ತನ್ಷಿಪುರ ಪ್ರದೇಶದಲ್ಲಿರುವ ನೆರೆಹೊರೆಯವರಾದ ಅನಿತಾ ಗುಪ್ತಾ ಎಂಬುವವರ ಜಮೀನಿಗೆ ಹೊಂದಿಕೊಂಡಂತಿರುವ ಜಮೀನಿನಲ್ಲಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ಜಮೀನಿನಲ್ಲಿರುವ 50ಕ್ಕೂ ಹೆಚ್ಚು ಪಾಪ್ಲರ್ ಹಾಗೂ ನೀಲಗಿರಿ ಮರಗಳನ್ನು ಕಡಿದಿರುವ ಕಾದಿರ್ ರಾಣಾ, ತನ್ನ ಜಮೀನಿನ ತಡೆಗೋಡೆಯನ್ನು ಒಡೆದು, ತನ್ನ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ದೂರುದಾರಳಾದ ಅನಿತಾ ಗುಪ್ತಾ ಆರೋಪಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾದಿರ್ ರಾಣಾರ ಕಾರ್ಖಾನೆಯಿಂದ ರಾಸಾಯನಿಕ ದ್ರವ್ಯಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ನನ್ನ ಜಮೀನಿಗೆ ಬಿಡುತ್ತಿರುವುದರಿಂದ ನನ್ನ ಬೆಳೆಗೂ ಹಾನಿಯಾಗುತ್ತಿದೆ ಎಂದು ಅನಿತಾ ಗುಪ್ತಾ ಆರೋಪಿಸಿದ್ದಾರೆ.
ಆಕೆಯ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ವೃತ್ತಾಧಿಕಾರಿ ಬಹದ್ದೂರ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.