ಶಾಲೆಯಲ್ಲಿ ಕಿರುಕುಳ ಆರೋಪ: ವಿದ್ಯಾರ್ಥಿ ಆತ್ಮಹತ್ಯೆ
ಚಂಡೀಗಢ: ಶಾಲೆಯ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹರ್ಯಾಣದ ರೇವರಿ ಜಿಲ್ಲೆಯ ಗೋತ್ರಪಾಲಿ ಗ್ರಾಮದ ಶಾಲಾ ಆವರಣದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹಾಸ್ಟೆಲ್ ಕಟ್ಟಡದ ಮೂರನೇ ಮಹಡಿಯ ತನ್ನ ಕೊಠಡಿಯ ಬಾಲ್ಕನಿಯಿಂದ ಜಿಗಿದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕನ ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿದ್ಯಾರ್ಥಿ ಬರೆದಿಟ್ಟ ಆತ್ಮಹತ್ಯೆ ಟಿಪ್ಪಣಿ ಲಭ್ಯವಾಗಿದೆ. ಶಾಲೆಯಲ್ಲಿ ನೀಡುತ್ತಿರುವ ಕಿರುಕುಳ ಹಾಗೂ ಶಾಲಾ ವಾತಾವರಣ ಸರಿ ಇಲ್ಲದ ಕಾರಣ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆತ ಟಿಪ್ಪಣಿಯಲ್ಲಿ ತಿಳಿಸಿದ್ದಾನೆ ಎಂದು ಹೇಳಿದ್ದಾರೆ.
ಈ ಆತ್ಮಹತ್ಯೆ ಟಿಪ್ಪಣಿ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆ ಸೆಕ್ಷನ್ 306ರ ಅನ್ವಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
"ಇಲ್ಲಿ ವಾತಾವರಣ ಸರಿ ಇಲ್ಲ. ನನಗೆ ಕಿರುಕುಳ ನೀಡಲಾಗುತ್ತಿದೆ. ಶಿಕ್ಷಕರು ಪಾಠ ಮಾಡುವುದಿಲ್ಲ. ಅಕ್ರಮವಾಗಿ ಹಣ ಸಂಪಾದಿಸುವುದೇ ಅವರ ಗುರಿ. ಪ್ರತಿಯೊಬ್ಬರಿಗೂ ಅಧಿಕಾರಿಯಾಗಲು ಸಾಧ್ಯವಿಲ್ಲ. ನನ್ನನ್ನು ಶಾಲೆಯಿಂದ ಬಿಡಿಸುವಂತೆ ಎಲ್ಲರನ್ನೂ ಕೇಳಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ನನ್ನ ಸ್ನೇಹಿತರೂ ನನಗೆ ಮೋಸ ಮಾಡಿದರು. ನನಗೆ ಹತಾಶೆಯಾಗಿದೆ. ಇನ್ನು ಬದುಕುವುದು ಸಾಧ್ಯವಿಲ್ಲ" ಎಂದು 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಆತ್ಮಹತ್ಯೆ ಟಿಪ್ಪಣಿಯಲ್ಲಿ ಬರೆದಿದ್ದಾನೆ.