ರಾಜ್ಯಸಭೆಯಲ್ಲಿ ಅಸಂಸದೀಯ ಪದ ಪ್ರಯೋಗ ಆರೋಪ: ಪಿಯೂಷ್ ಗೋಯಲ್ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಹಕ್ಕುಚ್ಯುತಿ ನೋಟಿಸ್
ಪಿಯೂಷ ಗೋಯಲ್. | Photo: PTI
ಹೊಸದಿಲ್ಲಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ ’ರಾಜ್ಯಸಭೆಯಲ್ಲಿ ಅಸಂಸದೀಯ ಪದ ಪ್ರಯೋಗದ ಆರೋಪದಲ್ಲಿ ಮಂಗಳವಾರ ಕೇಂದ್ರ ಸಚಿವ ಪಿಯೂಷ ಗೋಯಲ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಅನ್ನು ನೀಡಿದೆ. ಮೇಲ್ಮನೆಯ ನಾಯಕರಾಗಿರುವ ಗೋಯಲ್ ಅವರು ಪ್ರತಿಪಕ್ಷ ನಾಯಕರನ್ನು ‘ದೇಶದ್ರೋಹಿಗಳು ’ಎಂದು ಉಲ್ಲೇಖಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಆರೋಪಿಸಿದರು.
ರಮೇಶ್ ಅವರು ತನ್ನ ಕ್ಯಾಬಿನ್ನಲ್ಲಿ ತನ್ನನ್ನು ಭೇಟಿಯಾಗಿ ಗೋಯಲ್ ಸದನದಲ್ಲಿ ಭಾಷಣದ ಸಂದರ್ಭ ಅಸಂಸದೀಯ ಪದವನ್ನು ಬಳಸಿದ್ದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ ರಾಜ್ಯಸಭೆಯ ಸಭಾಪತಿ ಜಗದೀಪ ಧನ್ಕರ್ ಅವರು,ತಾನು ಗೋಯಲ್ ಮಾತನ್ನು ಪರಿಶೀಲಿಸುತ್ತೇನೆ ಮತ್ತು ಸದನದ ದಾಖಲೆಗಳಿಂದ ಅದನ್ನು ಅಳಿಸುವುದಾಗಿ ಹೇಳಿದರು. ಕಾಂಗ್ರೆಸ್,ಟಿಎಂಸಿ,ಆಪ್,ಆರ್ಜೆಡಿ,ಡಿಎಂಕೆ,ಜೆಡಿಯು,ಎನ್ಸಿಪಿ ಮತ್ತು ಎಡಪಕ್ಷಗಳ ನಾಯಕರು ಹಕ್ಕುಚ್ಯುತಿ ನೋಟಿಸ್ ನೀಡಿದವರಲ್ಲಿ ಸೇರಿದ್ದಾರೆ.
ಈ ನಡುವೆ ಹಕ್ಕುಚ್ಯುತಿ ನೋಟಿಸ್ನ್ನು ಸಲ್ಲಿಸಿರುವುದಾಗಿ ಟ್ವೀಟಿಸಿರುವ ರಮೇಶ್,ಅಸಂಸದೀಯ ಪದ ಪ್ರಯೋಗಕ್ಕಾಗಿ ಗೋಯಲ್ ಸದನದಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಪರಸ್ಪರ ಸಮಾಲೋಚಿತ ನಿರ್ಣಯದ ಆಧಾರದಲ್ಲಿ ಮಣಿಪುರ ಕುರಿತು ತಕ್ಷಣದ ಚರ್ಚೆಗೆ ಅವಕಾಶ ನೀಡಲು ಮೋದಿ ಸರಕಾರದ ನಿರಂತರ ನಿರಾಕರಣೆ ಮತ್ತು ‘ಇಂಡಿಯಾ ’ ಪಕ್ಷಗಳ ನಾಯಕರ ವಿರುದ್ಧ ತನ್ನ ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸಲು ಸದನ ನಾಯಕ ಗೋಯಲ್ ಅವರ ನಿರಂತರ ನಿರಾಕರಣೆಯಿಂದಾಗಿ ‘ಇಂಡಿಯಾ’ಪಕ್ಷಗಳು ಇಂದು ರಾಜ್ಯಸಭೆಯಿಂದ ಹೊರನಡೆದವು ಎಂದೂ ರಮೇಶ ಹೇಳಿದ್ದಾರೆ.
ನಂತರ ಇಂಡಿಯಾ ’ಮೈತ್ರಿಕೂಟದ ಇತರ ಪಕ್ಷಗಳೂ ಗೋಯಲ್ರಿಂದ ಕ್ಷಮೆ ಯಾಚನೆಗೆ ಆಗ್ರಹಿಸಿದವು. ಇಷ್ಟಾದ ಬಳಿಕ, ಅಸಂಸದೀಯವಾಗಿರಬಹುದಾದ ಯಾವುದೇ ಶಬ್ದಗಳನ್ನು ತಾನು ಹಿಂದೆಗೆದುಕೊಳ್ಳುತ್ತೇನೆ ಎಂದು ಹೇಳಿದ ಗೋಯಲ್,ಅವುಗಳನ್ನು ದಾಖಲೆಗಳಿಂದ ತೆಗೆಯುವಂತೆ ಸಭಾಪತಿಗಳನ್ನು ಆಗ್ರಹಿಸಿದರು.