ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಆರೋಪ: ರಾಜ್ಯ ಸರಕಾರ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದ ಪ್ರತಿಪಕ್ಷ ನಾಯಕ ಸತೀಶನ್
ಪ್ರತಿಪಕ್ಷ ನಾಯಕ ಸತೀಶನ್ | PC : X
ತಿರುವನಂತಪುರಮ್: ಮಲಯಾಳಂ ಚಿತ್ರರಂಗದ ಹಲವು ನಟಿಯರು ಮಾಡಿರುವ ಲೈಂಗಿಕ ಕಿರುಕುಳ ಆರೋಪಗಳ ಹಿನ್ನೆಲೆಯಲ್ಲಿ ಕೇರಳದಲ್ಲಿ ಆಕ್ರೋಶ ಮತ್ತು ಪ್ರತಿಭಟನೆ ದಿನೇ ದಿನೇ ಹೆಚ್ಚುತ್ತಿದೆ. ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ನಟ-ರಾಜಕಾರಣಿ ಮುಕೇಶ್ ಸೇರಿದಂತೆ ಅಪರಾಧಿಗಳನ್ನು ರಾಜ್ಯ ಸರಕಾರ ರಕ್ಷಿಸುತ್ತಿದೆ ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಕ್ರವಾರ ಆರೋಪಿಸಿದ್ದಾರೆ.
ಸಿಪಿಐ ಶಾಸಕ ಮುಕೇಶ್ ರಾಜೀನಾಮೆ ನೀಡಬೇಕು ಮತ್ತು ಮಲಯಾಳಂ ಚಿತ್ರರಂಗದ ನಟಿಯರು ಮಾಡಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೊಚ್ಚಿ ಮತ್ತು ಕೊಲ್ಲಮ್ಗಳಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದಾಗಿ ನಟಿಯರು ನ್ಯಾಯಮೂರ್ತಿ ಹೇಮಾ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ.
ಕೊಚ್ಚಿಯಲ್ಲಿ ಪ್ರತಿಭಟನಾಕಾರರು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮುಕೇಶ್, ಸಿದ್ದೀಕ್ ಮತ್ತು ರಂಜಿತ್ರ ಪ್ರತಿಕೃತಿಗಳಿಗೆ ಪೊರಕೆಯಿಂದ ಬಾರಿಸಿದರು.
ಕೊಲ್ಲಮ್ನಲ್ಲಿ, ಮುಕೇಶ್ರ ನಿವಾಸದ ಹೊರಗೆ ಪ್ರತಿಭಟನೆ ನಡೆಯಿತು. ಶಾಸಕರು ತಕ್ಷಣ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಲಯಾಳಂ ಚಿತ್ರರಂಗದ ಲೈಂಗಿಕ ದೌರ್ಜನ್ಯ ಹಗರಣದ ಆರೋಪಿಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತಾರೂಢ ಪಕ್ಷದ ಒಳಗಿರುವ ‘‘ಬಲಾಢ್ಯರ ಗುಂಪೊಂದು’’ ರಕ್ಷಿಸುತ್ತಿದೆ ಎಂದು ಸತೀಶನ್ ಆರೋಪಿಸಿದರು.
ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕರೆ ನೀಡಿರುವ ಬೃಂದಾ ಕಾರಟ್ ಮತ್ತು ಬಿನಯ್ ವಿಶ್ವನ್ ಮುಂತಾದ ಸಿಪಿಎಂ ನಾಯಕರನ್ನೂ ‘‘ಬಲಾಢ್ಯರ ಗುಂಪು’’ ಬೆದರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
‘‘ಈ ‘ಬಲಾಢ್ಯರ ಗುಂಪಿನ’ ಎದುರು ತಥಾಕಥಿತ ಪ್ರಗತಿಪರ ನಾಯಕರು ದುರ್ಬಲರಾಗಿದ್ದಾರೆ’’ ಎಂದು ಅವರು ನುಡಿದರು.
ನ್ಯಾ. ಕೆ. ಹೇಮಾ ಸಮಿತಿಗೆ ನೀಡಿರುವ ಹೇಳಿಕೆಗಳಲ್ಲಿ, ಮಲಯಾಳಂ ಚಿತ್ರರಂಗದ ಕೆಲವು ನಟಿಯರು ತಮ್ಮ ಸಹನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದಾರೆ. ಮುಖ್ಯವಾಗಿ ಈ ನಟಿಯರು ನಟ-ರಾಜಕಾರಣಿ ಮುಕೇಶ್, ಸಿದ್ದೀಕ್, ಜಯಸೂರ್ಯ, ಮಣಿಯಂಪಿಲ್ಲ ರಾಜು, ಇಡವೇಲ ಬಾಬು ಮತ್ತು ನಿರ್ದೇಶ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದಾರೆ.
2017ರಲ್ಲಿ ನಟಿಯೊಬ್ಬರ ಮೇಲೆ ಆಕ್ರಮಣ ನಡೆದ ಬಳಿಕ, ಕೇರಳ ಸರಕಾರವು ನ್ಯಾ. ಹೇಮಾ ಸಮಿತಿಯನ್ನು ರಚಿಸಿತ್ತು.