ಒಡಿಶಾ ಅಧಿಕಾರಿಗಳು ಅದಾನಿಯಿಂದ ಲಂಚ ತೆಗೆದುಕೊಂಡಿರುವ ಆರೋಪ ಸುಳ್ಳು: ಬಿಜೆಡಿ
PC : PTI
ಭುವನೇಶ್ವರ : ಒಡಿಶಾವು ನವೀಕರಿಸಬಹುದಾದ ವಿದ್ಯುತ್ತನ್ನು ಕೇಂದ್ರೀಯ ದಾಸ್ತಾನಿನಿಂದ ಪಡೆದುಕೊಳ್ಳಲು ರಾಜ್ಯದ ಅಧಿಕಾರಿಗಳು ಅದಾನಿ ಗುಂಪಿನಿಂದ ಲಂಚ ತೆಗೆದುಕೊಂಡಿದ್ದಾರೆ ಎಂಬ ಆರೋಪವು ‘‘ಸುಳ್ಳು’’ ಎಂದು ಬಿಜು ಜನತಾ ದಳ (ಬಿಜೆಡಿ) ಶುಕ್ರವಾರ ಹೇಳಿದೆ.
ಬಿಜೆಡಿಯು ಒಡಿಶಾದಲ್ಲಿ 2000ದಿಂದ 2024ರವರೆಗೆ ಅಧಿಕಾರದಲ್ಲಿತ್ತು.
ಅದಾನಿ ಗ್ರೀನ್ ಕಂಪೆನಿಯು ಉತ್ಪಾದಿಸುವ ಸೌರ ವಿದ್ಯುತ್ತನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಪಡೆದುಕೊಳ್ಳುವುದಕ್ಕಾಗಿ ಅದಾನಿ ಗುಂಪಿನ ಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಸಹೋದರನ ಮಗ ಸಾಗರ್ ಅದಾನಿ ಒಡಿಶಾ ಸೇರಿದಂತೆ ಹಲವು ರಾಜ್ಯಗಳ ಸರಕಾರಿ ಅಧಿಕಾರಿಗಳಿಗೆ ಲಂಚಗಳನ್ನು ನೀಡಿದ್ದಾರೆ ಎಂಬುದಾಗಿ ಅಮೆರಿಕದ ಕಾನೂನು ಇಲಾಖೆಯು ನ್ಯೂಯಾರ್ಕ್ನ ನ್ಯಾಯಾಲಯವೊಂದರಲ್ಲಿ ಬುಧವಾರ ದೋಷಾರೋಪ ಪಟ್ಟಿ ಸಲ್ಲಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಒಡಿಶಾದ ಹೆಸರಿನಲ್ಲಿ ಮಾಡಲಾಗಿರುವ ಆರೋಪಗಳು ಆಧಾರರಹಿತ ಮತ್ತು ವಾಸ್ತವಿಕ ಸಂಗತಿಗಳನ್ನು ಆಧರಿಸಿಲ್ಲ’’ ಎಂದು ಒಡಿಶಾದ ಮಾಜಿ ಇಂಧನ ಸಚಿವ ಹಾಗೂ ಬಿಜೆಡಿ ಶಾಸಕ ಪಿ.ಕೆ. ದೇಬ್ ಹೇಳಿದ್ದಾರೆ.
‘‘ಒಪ್ಪಂದಕ್ಕೂ ಒಡಿಶಾ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಯಾವೆಲ್ಲಾ ಒಪ್ಪಂದಗಳು ಆಗಿದೆಯೋ ಅವುಗಳು ಗ್ರಿಡ್ಕೊ, ವಿತರಣಾ ಕಂಪೆನಿ ಮತ್ತು ಭಾರತೀಯ ಸೌರ ಇಂಧನ ನಿಗಮ (ಎಸ್ಇಸಿಐ)ಕ್ಕೆ ಸೀಮಿತವಾಗಿವೆ. ವಿದ್ಯುತ್ ಖರೀದಿ ಒಪ್ಪಂದದ ಬಗ್ಗೆ ರಾಜ್ಯ ಸರಕಾರಕ್ಕೆ ತಿಳಿಸಲಾಗಿದೆಯಾದರೂ ಈ ವಿಷಯಗಳಲ್ಲಿ ಅದರ ಪಾತ್ರವೇನೂ ಇಲ್ಲ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ದೇಬ್ ಹೇಳಿದರು.