ಕೋಮುದ್ವೇಷದ ಹೇಳಿಕೆ ನೀಡಿದ ಆರೋಪ ; ಅಣ್ಣಾಮಲೈ ವಿರುದ್ಧದ ಮೊಕದ್ದಮೆ ರದ್ದತಿಗೆ ಮದ್ರಾಸ್ ಹೈಕೋರ್ಟ್ ನಕಾರ
ಅಣ್ಮಾಮಲೈ | Photo: PTI
ಚೆನ್ನೈ : ಕೋಮುದ್ವೇಷದ ಹೇಳಿಕೆಯನ್ನು ನೀಡಿದ್ದಕ್ಕಾಗಿ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧ ಹೇರಿದ ಸುಪ್ರೀಂಕೋರ್ಟ್ ಆದೇಶವನ್ನು ವಿರೋಧಿಸಿದ್ದ ಸಂದರ್ಭ ಅಣ್ಮಾಮಲೈ ಕೋಮುದ್ವೇಷದ ಹೇಳಿಕೆಯನ್ನು ನೀಡಿದ್ದರೆಂದು ಆರೋಪಿಸಲಾಗಿತ್ತು.
ತಮಿಳುನಾಡು ಬಿಜೆಪಿ ಅಧ್ಯಕ್ಷರ ಹೇಳಿಕೆಯು ಕೋಮು ದ್ವೇಷದ ಕಿಡಿ ಹೊತ್ತಿಸುವ ಸಾಧ್ಯತೆಯಿತ್ತು ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಚೆನ್.ಆನಂದ್ ವೆಂಕಟೇಶ್ ಅವರು ಅಭಿಪ್ರಾಯಿಸಿದರು.
ವಿಭಿನ್ನ ಸಮುದಾಯಗಳ ನಡುವೆ ಶತ್ರುತ್ವವನ್ನು ಪ್ರಚೋದಿಸುವಂತಹ ಹೇಳಿಕೆಯನ್ನು ನೀಡಿದ್ದಕ್ಕಾಗಿ ಭಾರತೀಯ ದಂಡಸಂಹಿತೆಯ ಸೆಕ್ಷನ್ ಗಳಾದ 153ಎ ಹಾಗೂ 505 (1) (ಬಿ) ಅಡಿ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಾಗಿತ್ತು.
ಯೂಟ್ಯೂಬ್ ಚಾನೆಲ್ ಒಂದರಲ್ಲಿ ಅಣ್ಣಾಮಲೈ ಅವರು ನೀಡಿದ ಸಂದರ್ಶನದಲ್ಲಿ ಪಟಾಕಿಗಳನ್ನು ಸಿಡಿಸುವುದರ ವಿರುದ್ಧ ಕ್ರೈಸ್ತ ಎನ್ಜಿ ಓ ಪ್ರಪ್ರಥಮವಾಗಿ ಮೊಕದ್ದಮೆ ಹೂಡಿತ್ತು ಎಂದು ಆಪಾದಿಸಿದ್ದರು.
ಅಣ್ಣಾಮಲೈ ಅವರ ಈ ಹೇಳಿಕೆಯು ಕ್ರೈಸ್ತರ ವಿರುದ್ಧ ಶತ್ರುತ್ವವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿತ್ತೆಂದು ಆರೋಪಿಸಿ ಮಾನವಹಕ್ಕುಗಳ ಕಾರ್ಯಕರ್ತ ಪಿಯೂಶ್ ಮನುಶ್ ಎಂಬವರು ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು.