ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಂದುವರಿದಿದೆ, ರಾಹುಲ್ ಗಾಂಧಿ ಜೊತೆ ಭಿನ್ನಾಭಿಪ್ರಾಯವಿಲ್ಲ: ಅಖಿಲೇಶ್ ಯಾದವ್ ಸ್ಪಷ್ಟನೆ
Photo: PTI
ಹೊಸದಿಲ್ಲಿ: ಕಾಂಗ್ರೆಸ್ ಜೊತೆಗಿನ ಸಂಬಂಧಗಳು ಬಿರುಕು ಬಿಟ್ಟಿವೆ ಎಂಬ ಮಾಧ್ಯಮ ವರದಿಗಳನ್ನು ಅಲ್ಲಗಳೆದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಕೂಟ ಇನ್ನೂ ಇದೆ ಹಾಗೂ ರಾಹುಲ್ ಗಾಂಧಿ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದಿದ್ದಾರೆ.
“ಉತ್ತಮವಾಗಿ ಅಂತ್ಯಗೊಳ್ಳುವ ಎಲ್ಲವೂ ಒಳ್ಳೆಯದು. ಯಾವುದೇ ಕಲಹವಿಲ್ಲ, ಮೈತ್ರಿ ಇರಲಿದೆ,” ಎಂದು ಭಾರತ್ ಜೋಡೋ ನ್ಯಾಯ್ ಯಾತ್ರಾದಲ್ಲಿ ತಮ್ಮ ಅನುಪಸ್ಥಿತಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಅಂತಿಮಗೊಂಡ ನಂತರವಷ್ಟೇ ರಾಹುಲ್ ಅವರ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಇತ್ತೀಚೆಗೆ ಅಖಿಲೇಶ್ ಹೇಳಿದ್ದರು.
ಸೀಟು ಹಂಚಿಕೆ ಕುರಿತಂತೆ ಎರಡೂ ಪಕ್ಷಗಳು ಶೀಘ್ರದಲ್ಲಿಯೇ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 17ರಿಂದ 19 ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪಿದೆ.