ಶಿಕ್ಷಕಿಯ ವಿಚಾರಣೆಗೆ ತಕ್ಷಣ ಅನುಮತಿ ನೀಡಿ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಸೂಚನೆ
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ಮನೆಪಾಠ ಮುಗಿಸಲು ವಿಫಲವಾಗಿದ್ದ ಮುಸ್ಲಿಂ ಸಹಪಾಠಿಯ ಕೆನ್ನೆಗೆ ಹೊಡೆಯಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಶಾಲಾ ಶಿಕ್ಷಕಿಯನ್ನು ವಿಚಾರಣೆಗೊಳಪಡಿಸಲು ಅನುಮತಿ ನೀಡುವ ಕುರಿತು ತಕ್ಷಣವೇ ನಿರ್ಧರಿಸಬೇಕು ಎಂದು ಸೋಮವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅದಕ್ಕೆ ಪ್ರತಿಯಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ (ಉದ್ದೇಶಪೂರ್ವಕ ಹಾಗೂ ದುರದ್ದೇಶಪೂರ್ವಕ ಕೃತ್ಯದಿಂದ ಧಾರ್ಮಿಕ ನಿಂದನೆ ಮಾಡುವುದು ಅಥವಾ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದರ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವುದು) ಹಾಗೂ ಬಾಲಾಪರಾಧ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ಸೆಕ್ಷನ್ 75ರ ಎರಡನೆ ಪರಿಚ್ಛೇದದಡಿ ಶಾಲಾ ಶಿಕ್ಷಕಿ ತ್ರಿಪಾಠಿ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಲಾಯಿತು.
ಬಾಲಾಪರಾಧ ನ್ಯಾಯದ ಸೆಕ್ಷನ್ 75ರ ಎರಡನೆಯ ಪರಿಚ್ಛೇದವು ಉದ್ಯೋಗಕ್ಕಿರಿಸಿಕೊಂಡಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ನಿರ್ವಹಿಸುವ ವ್ಯಕ್ತಿಯು ಮಗುವಿನ ಮೇಲೆ ಹಲ್ಲೆ ಅಥವಾ ಬೈಗುಳ ಪ್ರಯೋಗಿಸಿ, ಅದರಿಂದ ಆ ಅಪ್ರಾಪ್ತ ಮಗುವು ಅನಗತ್ಯ ಮಾನಸಿಕ ಅಥವಾ ದೈಹಿಕ ನೋವಿಗೆ ಒಳಗಾದರೆ ಅಂತಹ ಮಗುವಿಗೆ ಆರೈಕೆ ಒದಗಿಸಿ, ರಕ್ಷಣೆಯನ್ನು ಖಾತ್ರಿಗೊಳಿಸುತ್ತದೆ.
ನ್ಯಾ. ಅಭಯ್ ಎಸ್. ಓಕಾ ಹಾಗೂ ಪಂಕಜ್ ಮಿತ್ತಲ್ ಅವರನ್ನೊಳಗೊಂಡ ನ್ಯಾಯಪೀಠವು ಮೀರತ್ ವಲಯದ ಪೊಲೀಸ್ ಮಹಾನಿರೀಕ್ಷಕರು ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ನಂತರ, “ಪ್ರಮಾಣ ಪತ್ರದಲ್ಲಿ ತನಿಖೆಯು ಮುಕ್ತಾಯಗೊಂಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ ಅಡಿ ಶಿಕ್ಷಕಿಯನ್ನು ವಿಚಾರಣೆಗೊಳಪಡಿಸಲು ಸರ್ಕಾರದ ಅನುಮತಿಯನ್ನು ಕಾಯಲಾಗುತ್ತಿದೆ ಎಂದು ಹೇಳಲಾಗಿದೆ. ಸರ್ಕಾರವು ಕೂಡಲೇ ವಿಚಾರಣೆಗೆ ಅನುಮತಿ ಕೊಡುವ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ನಾವು ಸೂಚಿಸುತ್ತೇವೆ. ಸಂತ್ರಸ್ತ ಮಗುವಿನ ಭವಿಷ್ಯ ಮತ್ತು ಆತನ ಕಲ್ಯಾಣದ ವಿಚಾರಕ್ಕೆ ಬಂದಾಗ, ಸರ್ಕಾರವು ಈ ಪ್ರಕರಣವನ್ನು ಪ್ರತಿಕೂಲಕರ ಎಂಬಂತೆ ಪರಿಗಣಿಸಬಾರದು” ಎಂದು ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣದ ಕುರಿತು ತ್ವರಿತ ತನಿಖೆ ನಡೆಯಬೇಕು ಎಂದು ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭ ಈ ಸೂಚನೆ ಹೊರಬಿದ್ದಿದೆ