ನ್ಯಾಯವಾದಿ, ಹಿರಾನಂದಾನಿ ಅವರ ಪಾಟಿ ಸವಾಲಿಗೆ ಅವಕಾಶ ನೀಡಿ: ನೈತಿಕ ಸಮಿತಿಯನ್ನು ಕೋರಿದ ಮಹುವಾ ಮೊಯಿತ್ರಾ
ಪ್ರಶ್ನೆಗಾಗಿ ಹಣ ಪ್ರಕರಣ
ಮಹುವಾ ಮೊಯಿತ್ರಾ Photo- PTI
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯವಾದಿ ಜೈ ಅನಂತ್ ದೆಹಾದ್ರೈ ಹಾಗೂ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಪಾಟಿ ಸವಾಲಿಗೆ ಅವಕಾಶ ನೀಡುವಂತೆ ಲೋಕಸಭೆಯ ನೈತಿಕ ಸಮಿತಿಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರು ಹಿರಾನಂದಾನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಾಗೂ ದೆಹಾದ್ರೈ ಅವರು ನೀಡಿದ ದೂರಿಗೆ ಸಂಬಂಧಿಸಿ ನೈತಿಕ ಸಮಿತಿ ಮೊಯಿತ್ರಾ ಅವರ ವಿಚಾರಣೆ ನಡೆಸುತ್ತಿದೆ.
ಮೊಯಿತ್ರಾ ಅವರ ವಿರುದ್ಧದ ನಿಶಿಕಾಂತ್ ದುಬೆ ಅವರ ಆರೋಪವನ್ನು ಹಿರಾನಂದಾನಿ ಸಮೂಹ ಆರಂಭದಲ್ಲಿ ನಿರಾಕರಿಸಿತ್ತು. ಆದರೆ, ರಿಯಲ್ ಎಸ್ಟೇಟ್ ಕಂಪೆನಿಯ ಸಿಇಒ ಹಿರಾನಂದಾನಿ ಅವರು ಅಕ್ಟೋಬರ್ 19ರಂದು ನೈತಿಕ ಸಮಿತಿಗೆ ಅಫಿಡಾವಿಟ್ ಸಲ್ಲಿಸಿದ್ದರು. ಅದರಲ್ಲಿ ಮೊಯಿತ್ರಾ ಅವರು ಉದ್ಯಮಿ ಗೌತಮ್ ಅದಾನಿ ವಿರುದ್ಧ ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಗದಿಗಾಗಿ ಪ್ರಶ್ನೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿ ಮಂಗಳವಾರ ತನ್ನ ಮುಂದೆ ಹಾಜರಾಗುವಂತೆ ಮೊಯಿತ್ರಾ ಅವರಿಗೆ ಸಂಸದೀಯ ಸಮಿತಿ ಸಮನ್ಸ್ ನೀಡಿತ್ತು. ಆದರೆ, ಮೊಯಿತ್ರಾ ಅವರು ತನಗೆ ಶನಿವಾರದವರೆಗೆ ಕೆಲವು ಬದ್ಧತೆಗಳಿವೆ. ಆದುದರಿಂದ ಇನ್ನಷ್ಟು ಸಮಯಾವಕಾಶ ನೀಡುವಂತೆ ಅವರು ಕೋರಿದ್ದರು. ಆದರೆ, ಅದಕ್ಕೆ ನೈತಿಕ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ತನ್ನ ಪತ್ರದಲ್ಲಿ ಮೊಯಿತ್ರಾ ಅವರು, ಲಂಚ ಆರೋಪಕ್ಕೆ ಆಧಾರವಾದ ಯಾವುದೇ ಪುರಾವೆಗಳು ದೆಹಾದ್ರೈ ಅಥವಾ ಹಿರಾನಂದಾನಿ ಅವರಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅವರಿಗೆ ಪಾಟಿ ಸವಾಲು ಹಾಕಲು ತನಗೆ ಅವಕಾಶ ನೀಡದೆ ತನಿಖಾ ಸಮಿತಿ ನಡೆಸುವ ತನಿಖೆ ಅಸಂಪೂರ್ಣ ಹಾಗೂ ಅಸಮಾನ ಎಂದು ಅವರು ಹೇಳಿದ್ದಾರೆ.
‘‘ಮಂಗಳವಾರದ ನಂತರ ಹಾಜರಾಗುವ ತನ್ನ ಕೋರಿಕೆಗೆ ನೈತಿಕ ಸಮಿತಿ ಅನುಮತಿ ನೀಡಿಲ್ಲ. ಆದುದರಿದ ತಾನು ಗುರುವಾರ ಹಾಜರಾಗಲಿದ್ದೇನೆ’’ ಎಂದು ಮೊಯಿತ್ರಾ ಹೇಳಿದ್ದಾರೆ.