ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ : ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ನಕಾರ
ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ
ಜ್ಞಾನವಾಪಿ ಮಸೀದಿ, ಅಲಹಾಬಾದ್ ಹೈಕೋರ್ಟ್ | Photo: PTI
ಲಕ್ನೋ : ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿರುವ ವಾರಣಾಸಿ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮಸೀದಿಯ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎಂದು livelaw.com ವರದಿ ಮಾಡಿದೆ.
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಆದೇಶ ಹೊರಡಿಸಿದ ಬಳಿಕ ತೆಹ್ಖಾನಾದ ಒಳಗೆ ಜನವರಿ 31 ರಿಂದ ಪೂಜೆ ಪ್ರಾರಂಭವಾಯಿತು. ಪೂಜೆಗೆ ಸೂಕ್ತ ವ್ಯವಸ್ಥೆ ಮಾಡಿಕೊಡಲು ನ್ಯಾಯಾಧೀಶರು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಿದ್ದರು. ಅದೇ ದಿನ ಆದೇಶವನ್ನು ಮ್ಯಾಜಿಸ್ಟ್ರೇಟ್ ಪಾಲಿಸಿದ್ದರು.
ಗುರುವಾರ, ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಯು, ಹಿಂದೂಗಳಿಗೆ ಜ್ಞಾನವಾಪಿ ಮಸೀದಿಯ ʼವ್ಯಾಸ್ ಜಿ ಕಾ ತೆಹ್ಖಾನಾʼ ದಕ್ಷಿಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತು. ಪೂಜಾ ವಿಧಿವಿಧಾನಗಳಿಗೆ ತಡೆ ನೀಡುವಂತೆಯೂ ಸಮಿತಿ ಕೋರಿತ್ತು..
ಶುಕ್ರವಾರ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್ ಅವರ ಪೀಠವು ಮಸೀದಿ ಸಮಿತಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿತು. ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಪೂಜೆಗೆ ಅವಕಾಶ ನೀಡುವ ಆದೇಶದ ವಿರುದ್ಧ ಮಸೀದಿ ಸಮಿತಿಯ ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.