ಉತ್ತರಾಖಂಡದ ಅಲ್ಮೋರಾ ಅಪಘಾತ ಪ್ರಕರಣ | ಮೂವರ ವಿರುದ್ಧ ಎಫ್ ಐ ಆರ್
ಬಸ್ ಕಮರಿಗೆ ಬಿದ್ದು ಜೀವಕಳೆದುಕೊಂಡಿದ್ದ 36 ಮಂದಿ
ಅಲ್ಮೋರಾ ಅಪಘಾತ | PC : PTI
ಹೊಸದಿಲ್ಲಿ : ಅಲ್ಮೋರಾದಲ್ಲಿ ಬಸ್ ಕಮರಿಗೆ ಬಿದ್ದು 36 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಮಾಲಕರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಎಫ್ ಐ ಆರ್ ನಲ್ಲಿ ಚಾಲಕ, ನಿರ್ವಾಹಕ ಮತ್ತು ಮಾಲಕರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 281, 106 (1) ಮತ್ತು 61ರಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಮದನ್ ಮೋಹನ್ ಜೋಶಿ ತಿಳಿಸಿದ್ದಾರೆ.
ಅಪಘಾತದ ಗಾಯಾಳುಗಳನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಲ್ಲಿ ಅಲ್ಮೋರಾ ಮತ್ತು ಪೌರಿ ಗರ್ವಾಲ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.
ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡು ಬದುಕುಳಿದ ಮೂರು ವರ್ಷದ ಬಾಲಕಿಯ ವಿದ್ಯಾಭ್ಯಾಸ, ಪೋಷಣೆಗೆ ಸಂಬಂಧಿಸಿ ಸಂಪೂರ್ಣ ಜವಾಬ್ಧಾರಿಯನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.