ಆರೋಪಿಯ ಬಂಧನಕ್ಕೆ ಪೊಲೀಸರಿಗೆ ಅಡ್ಡಿ | ಆಪ್ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಪ್ರಕರಣ ದಾಖಲು

ಅಮಾನತುಲ್ಲಾ ಖಾನ್ | PC : NDTV
ಹೊಸದಿಲ್ಲಿ: ಹತ್ಯೆ ಯತ್ನ ಪ್ರಕರಣದಲ್ಲಿ ವ್ಯಕ್ತಿಯೋರ್ವರನ್ನು ಬಂಧಿಸಲು ಪ್ರಯತ್ನಿಸಿದ ಪೊಲೀಸರ ತಂಡಕ್ಕೆ ತಡೆ ಒಡ್ಡಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ದಿಲ್ಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಇನ್ಸ್ಪೆಕ್ಟರ್ ಸುನೀಲ್ ಕಲ್ಖಂಡೆ ನೇತೃತ್ವದ ಕ್ರೈಮ್ ಬ್ರಾಂಚ್ ತಂಡ ಹತ್ಯೆ ಯತ್ನ ಪ್ರಕರಣದ ಆರೋಪಿ ಶಾವೇಝ್ ಖಾನ್ ಅವರನ್ನು ಸೋಮವಾರ ವಶಕ್ಕೆ ತೆಗೆದುಕೊಂಡಿತು. ಅವರನ್ನು ಬಂಧಿಸುವ ಪ್ರಕ್ರಿಯೆಯ ಸಂದರ್ಭ ಅಮಾನತುಲ್ಲಾ ಖಾನ್ ಹಾಗೂ ಆತನ ಬೆಂಬಲಿಗರು ಪೊಲೀಸ್ ತಂಡಕ್ಕೆ ತಡೆ ಒಡ್ಡಿದರು.
‘‘ಶಾಸಕ ಅಮಾನತುಲ್ಲಾ ಖಾನ್ ಹಾಗೂ ಅವರ ಬೆಂಬಲಿಗರು ಸ್ಥಳದಲ್ಲಿ ಇದ್ದರು. ಅವರು ಶಾವೇಝ್ ಬಂಧನದ ಪ್ರಕ್ರಿಯೆಗೆ ಅಡ್ಡಿಪಡಿಸಿದರು. ಶಾವೇಝ್ ಅವರು ಕ್ರಿಮಿನಲ್ ಅಲ್ಲ ಎಂದು ಪ್ರತಿಪಾದಿಸಿದರು’’ ಎಂದು ಡಿಸಿಪಿ (ಆಗ್ನೇಯ) ರವಿ ಕುಮಾರ್ ಹೇಳಿದ್ದಾರೆ.
ಇದು ಶಾವೇಝ್ ಪರಾರಿಯಾಗಲು ಕಾರಣವಾಯಿತು. ಅನಂತರ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಮಾನತುಲ್ಲಾ ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶಾವೇಝ್ ಖಾನ್ ವಿರುದ್ಧ 2018 ಜನವರಿಯಲ್ಲಿ ಈ ಪ್ರಕರಣ ದಾಖಲಿಸಲಾಗಿತ್ತು. ಅವರು ಹಾಗೂ ಅವರ ಸಹವರ್ತಿಗಳು ವೈಯುಕ್ತಿಕ ದ್ವೇಷದ ಕಾರಣಕ್ಕೆ ಮೂವರು ವ್ಯಕ್ತಿಗಳಿಗೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿದ್ದಾರೆ. ಈ ಹಲ್ಲೆಯಿಂದ ಓರ್ವ ಗಂಭೀರ ಗಾಯಗೊಂಡಿದ್ದ ಎಂದು ಅವರು ತಿಳಿಸಿದ್ದಾರೆ.