ಚುನಾವಣಾ ನಿಯಮಗಳಿಗೆ ತಿದ್ದುಪಡಿ | ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್
ಸುಪ್ರೀಂ | PC : PTI
ಹೊಸದಿಲ್ಲಿ: 1961ರ ಚುನಾವಣಾ ನಿರ್ವಹಣಾ ನಿಯಮಗಳಿಗೆ ನಿರ್ದಿಷ್ಟ ತಿದ್ದುಪಡಿಗಳನ್ನು ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ ಅರ್ಜಿಯ ಆಲಿಕೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ವಿಸ್ತೃತವಾದ ಪ್ರತಿಕ್ರಿಯೆಯನ್ನು ಕೋರಿ ಬುಧವಾರ ಕೇಂದ್ರ ಸರಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
‘‘. ಮಾರ್ಚ್ 17ರಂದು ಆರಂಭಗೊಳ್ಳುವ ವಾರದಲ್ಲಿ ಸಂಬಂಧಪಟ್ಟ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿ, ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ್ದೇವೆ ಮತ್ತು ಪ್ರಕರಣದ ಬಗ್ಗೆ ಅವರಿಂದ ವಿಸ್ತೃತ ಉತ್ತರವನ್ನು ಕೋರಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಪಿ.ವಿ.ಸಂಜಯ್ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು ಮತ್ತು ಪ್ರಕರಣದ ಆಲಿಕೆಯನ್ನು ಮಾರ್ಚ್ 17ರಂದು ಮುಂದೂಡಿತು. ಜೈರಾಮ್ ರಮೇಶ್ ಅವರ ಅರ್ಜಿಯಲ್ಲಿ ಸತ್ವವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟತು ಹಾಗೂ ಈ ಬಗ್ಗೆ ಪ್ರತಿಕ್ರಿಯಿಸುವ ಕೋರಿ ಸಂಬಂಧಪಟ್ಟ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು ಮತ್ತು ಮುಂದಿನ ಆಲಿಕೆಯನ್ನು ಮಾರ್ಚ್ 17ಕ್ಕೆ ನಿಗದಿಪಡಿಸಿತು.
ಚುನಾವಣಾ ನಿರ್ವಹಣೆ ನಿಯಮಗಳಿಗೆ ಮಾಡಲಾದ ತಿದ್ದುಪಡಿಯು ಚುನಾವಣಾ ಪ್ರಕ್ರಿಯೆಯು ಪಾರದರ್ಶಕತೆ ಹಾಗೂ ಉತ್ತರದಾಯಿತ್ವಕ್ಕೆ ಸಂಬಂದಿಸಿದ ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದನ್ನು ತಡೆಯುತ್ತದೆ ಎಂದು
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ ಜೈರಾಮ್ ರಮೇಶ್ ಅವರು, ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಆಪಾದಿಸಿದ್ದರು.
ಅಭ್ಯರ್ಥಿಗಳ ಸಿಸಿಟಿವಿ, ವೀಡಿಯೊ ದೃಶ್ಯಾವಳಿ, ವೆಬ್ಕಾಸ್ಟಿಂಗ್ ರೆಕಾರ್ಡಿಂಗ್ ಸೇರಿದಂತೆ ಇಲೆಕ್ಟ್ರಾನಿಕ್ ದಾಖಲೆಗಳ ಸಾರ್ವಜನಿಕ ಪರಿಶೀಲನೆಯನ್ನು ನೂತನ ತಿದ್ದುಪಡಿಗಳು ತಡೆಯುತ್ತವೆ ಎಂದು ರಮೇಶ್ ಅವರು ಅರ್ಜಿಯಲ್ಲಿ ದೂರಿದ್ದರು.
ಜೈರಾಮ್ ರಮೇಶ್ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಅವರು, ಮತದಾನ ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರನ ಗುರುತು ಬಹಿರಂಗಗೊಳ್ಳುವುದೆಂಬ ಕಾರಣವನ್ನು ನೀಡಿ ಸಿಸಿಟಿವಿಯನ್ನು ತೆಗೆದುಹಾಕಲಾಗಿದೆಯೆಂದು ಎಂಬ ಕಾರಣವನ್ನು ಚುನಾವಣಾ ಆಯೋಗವು ಮಾಧ್ಯಮಗಳ ಮುಂದೆ ನೀಡಿತ್ತು ಎಂದು ನ್ಯಾಯಪೀಠದ ಗಮನಸೆಳೆದರು.
ಚುನಾವಣಾ ಪ್ರಕ್ರಿಯೆಯ ಬಗ್ಗೆ ಯಾವುದೇ ಲೋಪದೋಷ ಕಂಡುಬಂದಲ್ಲಿ ಅಥವಾ ಸಂದೇಹ ಮೂಡಿದಲ್ಲಿ ಸಂಬಂಧಪಟ್ಟ ಪತ್ರಗಳನ್ನು ಅಥವಾ ದಾಖಲೆಗಳನ್ನು ಸಾರ್ವಜನಿಕರ ಪರಿಶೀಲನೆಗೆ ನೀಡುವುದನ್ನು ನಿರ್ಬಂಧಿಸುವುದಕ್ಕಾಗಿ 1961ರ ಚುನಾವಣಾ ನಿರ್ವಹಣಾ ಕಾನೂನುಗಳ ನಿಯಮ 93(2)(ಎ)ಗೆ ತಿದ್ದುಪಡಿ ಮಾಡಿರುವುದನ್ನು ಅರ್ಜಿದಾರರು ಆಕ್ಷೇಪಿಸಿದ್ದರು.
ಸಾರ್ವಜನಿಕ ಸಮಾಲೋಚನೆಯನ್ನು ನಡೆಸದೆ ಇಂತಹ ಮಹತ್ವದ ಕಾನೂನಿಗೆ ರಾಜಾರೋಷವಾಗಿ ತಿದ್ದುಪಡಿ ತರುವುದಕ್ಕೆ ಅವಕಾಶ ನೀಡಕೂಡದೆಂದು ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.