ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕಾನೂನನ್ನು ಬಿಗಿಗೊಳಿಸಲು ತಿದ್ದುಪಡಿಗಳು 2020 ರಿಂದ ಬಾಕಿ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಸರ್ವೋಚ್ಚ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದ್ದರೆ, ಔಷಧಿ ಮತ್ತು ಜಾದೂ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ,1954ನ್ನು ಬಲಗೊಳಿಸಲು ಪ್ರಸ್ತಾವಿಸಲಾಗಿದ್ದ ತಿದ್ದುಪಡಿಗಳು ಫೆ.2020ರಿಂದಲೂ ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಬಾಕಿಯಾಗಿವೆ. ಕಳೆದ ತಿಂಗಳು ಆರ್ಟಿಐ ಉತ್ತರವೊಂದು ಇದನ್ನು ಬಹಿರಂಗಗೊಳಿಸಿದೆ.
ತಿದ್ದುಪಡಿಗಳನ್ನು ರಚಿಸಿದ ಸಮಿತಿಯು ಕಾಯ್ದೆಗೆ ಇನ್ನಷ್ಟು ಬಲ ನೀಡಲು ಮತ್ತು ಬದಲಾಗುತ್ತಿರುವ ಸಮಯ ಹಾಗೂ ತಂತ್ರಜ್ಞಾನಕ್ಕೆ ಅನುಗುಣವಾಗಿರಲು ಔಷಧಿ ಮತ್ತು ಜಾದೂ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) (ತಿದ್ದುಪಡಿ) ಮಸೂದೆ 2020ನ್ನು ಶಿಫಾರಸು ಮಾಡಿತ್ತು.
ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ರೋಗನಿರ್ಣಯ, ಚಿಕಿತ್ಸೆ ಇತ್ಯಾದಿಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ನಿಷೇಧಿಸಲು ಅವಕಾಶ ನೀಡುವ ಷರತ್ತುಗಳ ಸಂಖ್ಯೆ54ರಿಂದ 78ಕ್ಕೆ ಹೆಚ್ಚಿಸುವುದು ಪ್ರಸ್ತಾವಿಸಲಾದ ಮುಖ್ಯ ಬದಲಾವಣೆಗಳಾಗಿದ್ದವು. ಹಾಲಿ ಕಾಯ್ದೆಯಲ್ಲಿ ಮೊದಲ ಅಪರಾಧಕ್ಕೆ ಆರು ತಿಂಗಳವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದ್ದರೆ ಇದನ್ನು ಎರಡು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡಕ್ಕೆ ಹೆಚ್ಚಿಸಲು ಮಸೂದೆಯು ಪ್ರಸ್ತಾವಿಸಿದೆ. ನಂತರದ ಅಪರಾಧಗಳಿಗೆ ದಂಡನೆಯನ್ನು ಒಂದು ವರ್ಷದವರೆಗೆ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡೂ ಇರುವುದನ್ನು ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 50 ಲಕ್ಷ ರೂ.ವರೆಗೆ ಡಂಡಕ್ಕೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ.
2020,ಫೆ.3ರಂದು ಕರಡು ತಿದ್ದುಪಡಿಯನ್ನು ಪ್ರಕಟಿಸಿ,ಸಲಹೆ-ಸೂಚನೆಗಳನ್ನು ಆಹ್ವಾನಿಸಲಾಗಿತ್ತು. ಸ್ವೀಕರಿಸಲಾದ ಸಲಹೆಗಳನ್ನು ಕೇಂದ್ರೀಯ ಔಷಧಿಗಳ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಸಂಕಲಿಸಿ 2020,ಜೂನ್ ಅಂತ್ಯದಲ್ಲಿ ಆರೋಗ್ಯ ಸಚಿವಾಲಯಕ್ಕೆ ಕಳುಹಿಸಿತ್ತು. 2020 ನವಂಬರ್ನಲ್ಲಿ ಕರಡು ಸಂಪುಟ ಟಿಪ್ಪಣಿಯನ್ನು ಆರೋಗ್ಯ ಸಚಿವರ ಮುಂದಿರಿಸಲಾಗಿತ್ತು. ಕರಡು ಮಸೂದೆಯನ್ನು ರಾಜ್ಯಗಳಿಗೆ ವಿತರಿಸಲಾಗಿತ್ತು.
ಆದರೆ ಈಗಲೂ ಮಸೂದೆಯು ಗೃಹಸಚಿವಾಲಯದಲ್ಲೇ ಬಾಕಿಯಾಗಿದೆ.