“ಅಮೆರಿಕದಲ್ಲಿ ಬಂಧನದ ಸಮಯದಲ್ಲಿ ಗೋಮಾಂಸವನ್ನು ತಿನ್ನಲು ನೀಡಲಾಗಿತ್ತು”
ತಮ್ಮ ಸಂಕಷ್ಟಗಳನ್ನು ಬಿಚ್ಚಟ್ಟ ಸಾವಿನ ದವಡೆಯಿಂದ ಪಾರಾದ ಅಕ್ರಮ ವಲಸಿಗರು

PC : jagran.com
ಹೊಸದಿಲ್ಲಿ: ಉತ್ತಮ ಭವಿಷ್ಯಕ್ಕಾಗಿ ಅಮೆರಿಕಕ್ಕೆ ಹೋದ ಹಲವು ವಲಸಿಗರು, ತಮ್ಮ ಪ್ರಯಾಣದ ನಡುವೆ ಎದುರಿಸಿದ ಸಂಕಷ್ಟಗಳನ್ನು ತೆರೆದಿಟ್ಟಿದ್ದಾರೆ. ಅದನ್ನು ಹೇಳುವಾಗ ಅವರಿಗೆ ಮೈ ನಡುಕ ಬರುತ್ತಿತ್ತು. ಅಮೆರಿಕದಿಂದ ಬಲವಂತವಾಗಿ ಗಡೀಪಾರು ಮಾಡಲಾದ ಸುಖ್ಪಾಲ್ ಸಿಂಗ್, 30 ವರ್ಷದ ಲವ್ಪ್ರೀತ್ ಕೌರ್ ಅವರು ತಾವು ಎದುರಿಸದ ಸಂಕಷ್ಟದ ದಿನಗಳನ್ನು ನೆನೆಯುವಾಗ ಕಣ್ಣಂಚು ಭಾರವಾಗಿದ್ದವು. ಅವರ ದನಿ ಕ್ಷೀಣವಾಗಿತ್ತು ಎಂದು jagran.com ವರದಿ ಮಾಡಿದೆ.
ಹೋಶಿಯಾರ್ಪುರದ ದಾರಾಪುರ ಗ್ರಾಮದ ಸುಖ್ಪಾಲ್ ಸಿಂಗ್ ಅವರು ಅಮೆರಿಕದಲ್ಲಿ ಬಂಧನಕ್ಕೊಳಗಾದ ನಂತರ, ಅವರನ್ನು ಶಿಬಿರದಲ್ಲಿ ಇರಿಸಲಾಯಿತು. ಆ ಶಿಬಿರದಲ್ಲಿ, ವಲಸಿಗರನ್ನು ಬಂಧಿಸಿ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ಅಲ್ಲಿ ಅವರಿಗೆ ಆಹಾರವಾಗಿ ಗೋಮಾಂಸ ಮತ್ತು ತಿಂಡಿಗಳನ್ನುನೀಡಲಾಯಿತು ಎಂದು ಅವರು ಹೇಳಿದರು.
“ನಾನು 12 ದಿನಗಳನ್ನು ಕೇವಲ ತಿಂಡಿಗಳನ್ನು ತಿಂದು ಕಳೆದೆ. ಶಿಬಿರದಲ್ಲಿ ಕಾನೂನು ಸಲಹೆಗಾರರನ್ನು ಅಥವಾ ವಲಸೆ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವೇ ನೀಡಲಿಲ್ಲ”, ಎಂದು ಅವರು ಹೇಳಿದರು.
►ಕೈಕೋಳ ಹಾಕಿ ವಿಮಾನಯಾನ!
“ವಿಮಾನ ಹತ್ತುವ ಮೊದಲು ಅವರ ಕೈಗಳಿಗೆ ಕೋಳ ಹಾಕಲಾಗಿತ್ತು. ಸೊಂಟ ಮತ್ತು ಕಾಲುಗಳಿಗೆ ಸಂಕೋಲೆಗಳನ್ನು ಹಾಕಲಾಯಿತು. ಈ ಸಮಯದಲ್ಲಿ, ಯಾರಿಗೂ ತಮ್ಮ ಆಸನದಿಂದ ಕದಲಲು ಅವಕಾಶ ನೀಡಲಿಲ್ಲ. ಶೌಚಾಲಯಕ್ಕೂ ಪ್ರವೇಶ ಬಹಳ ಸೀಮಿತವಾಗಿತ್ತು. ಶೌಚಾಲಯ ಬಳಸುವುದನ್ನು ತಪ್ಪಿಸಲು, ನಾನು ವಿಮಾನದಲ್ಲಿ ಏನನ್ನೂ ತಿಂದಿಲ್ಲ ಅಥವಾ ಕುಡಿದಿಲ್ಲ. ವಿಮಾನ ಅಮೃತಸರದಲ್ಲಿ ಇಳಿದ ನಂತರ ಸಂಕೋಲೆಗಳನ್ನು ತೆಗೆದುಹಾಕಲಾಯಿತು. ಇಲ್ಲಿಗೆ ತಲುಪಿದ ನಂತರ ನನಗೆ ಕೊನೆಗೂ ಆಹಾರ ಸಿಕ್ಕಿತು”, ಎಂದು ಸುಖ್ಪಾಲ್ ತಮ್ಮ ಕೆಟ್ಟ ವಿಮಾನ ಪ್ರಯಾಣವನ್ನು ನೆನಪಿಸಿಕೊಂಡರು.
ಇಟಲಿಯಲ್ಲಿ ಒಂದು ವರ್ಷ ಅಡುಗೆಯವನಾಗಿ ಕೆಲಸ ಮಾಡಿದ ನಂತರ ಅಮೆರಿಕಕ್ಕೆ ಹೋಗಲು ನಿರ್ಧರಿಸಿದೆ ಎಂದು ಸುಖ್ಪಾಲ್ ತಮ್ಮ ʼಡಂಕಿ ಯಾನʼವನ್ನು ತೆರೆದಿಟ್ಟರು. ಸುಖ್ಪಾಲ್ ಮತ್ತು ಅವರ ಇಬ್ಬರು ಸ್ನೇಹಿತರು ಒಬ್ಬ ಟ್ರಾವೆಲ್ ಏಜೆಂಟ್ ಅನ್ನು ಸಂಪರ್ಕಿಸಿ ಡಂಕಿ ರೂಟ್ ಆರಿಸಿಕೊಂಡರು. ತಲಾ 30 ಲಕ್ಷ ರೂಪಾಯಿಗಳಿಗೆ ಅವರನ್ನು ಸುರಕ್ಷಿತವಾಗಿ ಅಮೆರಿಕಕ್ಕೆ ಕರೆದೊಯ್ಯುವುದಾಗಿ ಏಜೆಂಟ್ ಭರವಸೆ ನೀಡಿದ್ದ ಎಂದು ಅವರು ಹೇಳುತ್ತಾರೆ,
►ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಏಜೆಂಟ್!
ಅಕ್ರಮ ವಲಸೆಗೆ ಸಿದ್ಧರಾದ ಸುಖ್ಪಾಲ್ ಮತ್ತು ಅವರ ಸ್ನೇಹಿತರನ್ನು ಏಜೆಂಟ್, ಅಮೆರಿಕಕ್ಕೆ ಕರೆದೊಯ್ಯುವ ಬದಲು, ಇತರ ಯುವಕರೊಂದಿಗೆ ನಿಕರಾಗುವಾಕ್ಕೆ ಕರೆದೊಯ್ದನು. ಅಲ್ಲಿ ಏಜೆಂಟನ ಜನರು ಎಲ್ಲರ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡರು. ಬಳಿಕ ಹೊಂಡುರಾಸ್, ಗ್ವಾಟೆಮಾಲಾ ಮತ್ತು ಮೆಕ್ಸಿಕೊ ಮೂಲಕ ಕಠಿಣ ಪ್ರಯಾಣವನ್ನು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ.
ಮೆಕ್ಸಿಕೋದಿಂದ ಕ್ಯಾಲಿಫೋರ್ನಿಯಾದ ಅಮೆರಿಕದ ಗಡಿಗೆ ಸಾಗಲು ಸಮುದ್ರದಲ್ಲಿ ಸಣ್ಣ ದೋಣಿಯಲ್ಲಿ 12 ಗಂಟೆಗಳ ಪ್ರಯಾಣ ಮಾಡಬೇಕಾಗಿತ್ತು. ಈ ಅಪಾಯಕಾರಿ ಪ್ರಯಾಣದ ಸಮಯದಲ್ಲಿ, ಅವರ ಸಹ ಪ್ರಯಾಣಿಕರಲ್ಲಿ ಒಬ್ಬರು ಮುಳುಗಿ ಸಾವನ್ನಪ್ಪಿದರು. ಅಕ್ರಮ ವಲಸಿಗರು ಅಮೆರಿಕದ ಗಡಿಯನ್ನು ಪ್ರವೇಶಿಸಿದಾಗ ಅವರನ್ನು ಬಂಧಿಸಲಾಯಿತು.
►ಒಂದು ಕೋಟಿ ರೂ. ನೀಡಿ ನೇರ ಯಾನ ಆರಿಸಿದ್ದರೂ ಡಂಕಿ ರೂಟ್ ಬಳಸಿದ ಏಜೆಂಟ್!
ಕಪುರ್ತಲಾದ ಭೂಲತ್ನ ಲವ್ಪ್ರೀತ್ ಕೌರ್ ಅವರು ತಮ್ಮ ಜೀವವನ್ನು ಪಣಕ್ಕಿಟ್ಟು 25 ದಿನಗಳ ಹಿಂದೆ ತಮ್ಮ 10 ವರ್ಷದ ಮಗನೊಂದಿಗೆ ಅಮೆರಿಕಕ್ಕೆ ತೆರಳಿದ್ದರು ಎಂದು ಹೇಳಿದರು. ಅವರು ಮತ್ತು ತನ್ನ ಮಗ 25 ದಿನಗಳ ಕಾಲ ಡಂಕಿ ರೂಟ್ನಲ್ಲಿ ಅನೇಕ ಚಿತ್ರಹಿಂಸೆಗಳನ್ನು ಸಹಿಸಿಕೊಂಡರು. ಅಮೆರಿಕಕ್ಕೆ ನೇರವಾಗಿ ತೆರಳಲು ಟ್ರಾವೆಲ್ ಏಜೆಂಟ್ಗೆ 1 ಕೋಟಿ ರೂ. ನೀಡಲಾಗಿದ್ದರೂ, ಏಜೆಂಟ್ ಲವ್ಪ್ರೀತ್ ಕೌರ್ ಅವರನ್ನು ಬೇರೆ ಬೇರೆ ದೇಶಗಳಿಗೆ ಕರೆದೊಯ್ಯುತ್ತಲೇ ಇದ್ದನು.
ಅಮೆರಿಕದಲ್ಲಿ ಅವರನ್ನು ಬಂಧಿಸಿದ ತಕ್ಷಣ, ಪೊಲೀಸರು ಮೊಬೈಲ್ನಿಂದ ಸಿಮ್ ಕಾರ್ಡ್ ಅನ್ನು ತೆಗೆದುಹಾಕಿದರು. ಆಭರಣಗಳು, ಬಳೆಗಳು ಮತ್ತು ಕಿವಿಯೋಲೆಗಳನ್ನು ತೆಗೆಯಲಾಯಿತು. ಅವರನ್ನು ಐದು ದಿನಗಳ ಕಾಲ ಬಂಧನ ಶಿಬಿರದಲ್ಲಿ ಇರಿಸಿ ಗಡೀಪಾರು ಮಾಡಲಾಯಿತು. ಫೆಬ್ರವರಿ 2 ರಂದು, ಪೊಲೀಸರು ನಮ್ಮ ಕೈಗಳಿಗೆ ಕೋಳ ಹಾಕಿ, ಸೊಂಟದಿಂದ ಪಾದದವರೆಗೆ ನಮಗೆ ಸಂಕೋಲೆ ಹಾಕಿದರು. ಆದರೆ ಮಕ್ಕಳಿಗೆ ಈ ರೀತಿಯ ತೊಂದರೆ ಕೊಡಲಿಲ್ಲ ಎಂದು ಲವ್ ಪ್ರೀತ್ ಕೌರ್ ಹೇಳಿದರು.
►ಶೌಚಾಲಯಕ್ಕೆ ಹೋಗುವಾಗ ಕೈಕೋಳವನ್ನು ತೆರೆಯುತ್ತಿದ್ದರು
ಪಿಲಿಭಿತ್ ನ ಗುರುಪ್ರೀತ್ ಸಿಂಗ್ ರಿಂದ 22 ಲಕ್ಷ ರೂ.ಗಳನ್ನು ತೆಗೆದುಕೊಂಡ ನಂತರ, ಏಜೆಂಟರು ಅವರನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕರೆದೊಯ್ಯುತ್ತಲೇ ಇದ್ದರು. ಕೆಲವೊಮ್ಮೆ ವಿಮಾನದ ಮೂಲಕ ಮತ್ತು ಕೆಲವೊಮ್ಮೆ ಕಾರಿನ ಮೂಲಕ. 22 ದಿನಗಳ ಕಾಲ ಅಮೆರಿಕದ ಸೈನಿಕರ ಸೆರೆಯಲ್ಲಿದ್ದ ನಂತರ ಹಿಂತಿರುಗಿದ ಗುರುಪ್ರೀತ್, ವಿಮಾನದಲ್ಲಿ 104 ಭಾರತೀಯರಿದ್ದರು, ಆದರೆ ಅಮೆರಿಕದ ಸೈನಿಕರ ಸಂಖ್ಯೆ ಕಡಿಮೆ ಇತ್ತು ಎಂದು ಹೇಳಿದರು. ಕೈಕಾಲುಗಳಿಗೆ ಕೈಕೋಳ ಮತ್ತು ಸಂಕೋಲೆಗಳನ್ನು ಹಾಕಲಾಗಿತ್ತು. ತಿನ್ನಲು ಸ್ಯಾಂಡ್ವಿಚ್ ಮತ್ತು ಜ್ಯೂಸ್ ನೀಡಿದರು. ನಾವು ಶೌಚಾಲಯಕ್ಕೆ ಹೋದಾಗ ನಮ್ಮ ಕೈಕೋಳವನ್ನು ತೆಗೆಯುತ್ತಿದ್ದರು ಎಂದು ಅವರು ಹಿಂಸಾತ್ಮಕ ವಿಮಾನಯಾನವನ್ನು ನೆನಪಿಸಿಕೊಂಡರು.
ಸೌಜನ್ಯ : jagran.com