ಕಾಶ್ಮೀರದಲ್ಲಿ ಚುನಾವಣಾ ಪೂರ್ವ ಹಿಂಸೆ: ಬಿಜೆಪಿ ಮುಖಂಡ ಹತ್ಯೆ
Photo: PTI
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೋಪಿಯಾನಮತ್ತು ಅನಂತನಾಗ್ನಲ್ಲಿ ಶನಿವಾರ ನಡೆದ ಎರಡು ಉಗ್ರರ ದಾಳಿ ಪ್ರಕರಣಗಳಲ್ಲಿ ಬಿಜೆಪಿಯ ಮಾಜಿ ಸರಪಂಚ ಮೃತಪಟ್ಟಿದ್ದು, ಪ್ರವಾಸಿ ದಂಪತಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮೇ 20ರಂದು ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹಿಂಸಾಚಾರ ಮರುಕಳಿಸಿದೆ.
"ಅನಂತನಾಗ್ನ ಯನ್ನಾರ್ನಲ್ಲಿ ಪ್ರವಾಸಿಗಳ ಮೇಲೆ ನಡೆದ ದಾಳಿಯಲ್ಲಿ ಜೈಪುರದ ಫರ್ಹಾ ಎಂಬ ಮಹಿಳೆ ಹಾಗೂ ಆಕೆಯ ಪತಿ ತಬ್ರೇಸ್ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಇನ್ನಷ್ಟು ವಿವರಗಳನ್ನು ನೀಡಲಾಗುವುದು" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಎಕ್ಸ್ ಪೋಸ್ಟ್ನಲ್ಲಿ ಹೇಳಿದೆ.
ಸೋಪಿಯಾನ್ನ ಹಿರೋಪಾರಾ ಎಂಬಲ್ಲಿ ರಾತ್ರಿ 10.30ರ ಸುಮಾರಿಗೆ ಅಂದರೆ ಮೊದಲ ಘಟನೆ ನಡೆದ ಅರ್ಧಗಂಟೆ ಅವಧಿಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಮಾಜಿ ಸರಪಂಚ ಇಜಾಝ್ ಶೇಕ್ ಮೃತಪಟ್ಟಿದ್ದಾರೆ. ಶೇಖ್ ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯ ಸಾಹಸಿ ಸೈನಿಕ ಎಂದು ಬಿಜೆಪಿ ಬಣ್ಣಿಸಿದೆ. ಅವರ ಕುಟುಂಬದ ಜತೆ ಪಕ್ಷ ಇರುತ್ತದೆ ಎಂದು ಹೇಳಿಕೆ ನೀಡಿದೆ.
ಅನಂತನಾಗ್- ರಾಜೌರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ಮೇ 25ರಂದು ಮತದಾನ ನಡೆಯಲಿದೆ. ಈ ಉಗ್ರರ ದಾಳಿ ಘಟನೆಗಳನ್ನು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತು ಉಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಮುಫ್ತಿ ಅನಂತನಾಗ್ನಿಂದ ಸ್ಪರ್ಧಿಸಿದ್ದರೆ, ಉಮರ್ ಅಬ್ದುಲ್ಲಾ ಬಾರಾಮುಲ್ಲಾದ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ.