ಇಂಡಿಯಾ ಮೈತ್ರಿಕೂಟದ ಜೊತೆ ನಮ್ಮ ಪಕ್ಷ ಮುಂದುವರೆಯಲಿದೆ: ಟಿಕೆಟ್ ಹಂಚಿಕೆ ವಿವಾದದ ನಡುವೆ ಮಮತಾ ಬ್ಯಾನರ್ಜಿ ಹೇಳಿಕೆ
ಮಮತಾ ಬ್ಯಾನರ್ಜಿ (PTI)
ಕೊಲ್ಕತ್ತಾ: ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಕುರಿತಂತೆ ಸಹಮತ ಮೂಡದೇ ಇದ್ದ ಇತ್ತೀಚಿನ ಬೆಳವಣಿಗೆಯ ನಡುವೆಯೂ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಪಕ್ಷವು ಬಿಜೆಪಿಯ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಟಿಎಂಸಿಯ ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಸಂಘಟನಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಮೈತ್ರಿಕೂಟದೊಂದಿಗೆ ಟಿಎಂಸಿ ಇರಲಿದೆ ಎಂದು ಪಕ್ಷದ ಮುಖ್ಯಸ್ಥೆ ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ಅವರು ಸಿಪಿಐ(ಎಂ) ಅನ್ನು ಟೀಕಿಸಿದ್ದರೂ ಕಾಂಗ್ರೆಸ್ ಪಕ್ಷವನ್ನು ಟೀಕಿಸಿಲ್ಲ,” ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಟಿಎಂಸಿ ನಾಯಕರೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ಟಿಎಂಸಿ ಸಂಸದ ಸುದೀಪ್ ಬಂದೋಪಾಧ್ಯಾಯ ಪ್ರತಿಕ್ರಿಯಿಸಿ, ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಕುರಿತಂತೆ ತಮ್ಮ ಪಕ್ಷಕ್ಕೆ ಮುಕ್ತ ಮನಸ್ಸು ಇದೆ ಆದರೆ ಸಂಧಾನಗಳು ವಿಫಲವಾದರೆ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲೂ ಸಿದ್ಧವಿದೆ ಎಂದಿದ್ದರು.
ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಪ್ರತಿಕ್ರಿಯಿಸಿ, ಬಂಗಾಳದ ಆಡಳಿತ ಪಕ್ಷದೊಂದಿಗೆ ಸೀಟುಗಳಿಗೆ ಬೇಡುವುದಿಲ್ಲ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರ ಹೇಳಿಕೆ ಮಹತ್ವ ಪಡೆದಿದೆ.
ರಾಜ್ದ 42 ಸೀಟುಗಳ ಪೈಕಿ 4 ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ಟಿಎಂಸಿ ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.