ಅಮಿತ್ ಶಾ ವಿರುದ್ಧ ಕೆನಡಾ ಸಚಿವರ ಆರೋಪ ತಳ್ಳಿ ಹಾಕಿದ ಭಾರತ : ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್
ಅಮಿತ್ ಶಾ | PC: PTI
ಹೊಸದಿಲ್ಲಿ: ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಅಮಿತ್ ಶಾ ಕೈವಾಡ ಇದೆ ಎಂಬ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿಕೆಗೆ ಸಂಬಂಧಿಸಿ ಕೆನಡಾದ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ನಿಜ್ಜರ್ ಹತ್ಯೆ ಕುರಿತು ಕೆನಡಾ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಭಾರತ, ಆರೋಪವನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಹೇಳಿಕೊಂಡಿದೆ.
ಕೆನಡಾ ನೆಲದಲ್ಲಿನ ಖಾಲಿಸ್ಥಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿರುವುದನ್ನು ತಾನೇ ಖಚಿತಪಡಿಸಿ ವಾಷಿಂಗ್ಟನ್ ಪೋಸ್ಟ್ ಗೆ ಹೇಳಿಕೆ ನೀಡಿದ್ದಾಗಿ ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಹೇಳಿದ್ದರು. ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಕೇಳಲಾದ ಪ್ರಶ್ನೆಗೆ ಡೇವಿಡ್ ಮಾರಿಸನ್ ನೀಡಿದ್ದ ಈ ಉತ್ತರ ಭಾರೀ ಚರ್ಚೆಗೆ ಕಾರಣವಾಗಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆನಡಾ ಹೈಕಮಿಷನ್ ನ ಪ್ರತಿನಿಧಿಯನ್ನು ಕರೆಸಿಕೊಂಡು ಅವರಿಗೆ ಟಿಪ್ಪಣಿಯನ್ನು ಹಸ್ತಾಂತರಿಸಲಾಗಿದೆ. ಡೇವಿಡ್ ಮಾರಿಸನ್ ಅವರು ಸಮಿತಿಯ ಮುಂದೆ ಕೇಂದ್ರ ಗೃಹ ಸಚಿವರಿಗೆ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಆರೋಪಗಳನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ವಾಷಿಂಗ್ಟನ್ ಪೋಸ್ಟ್ ಗೆ ಅಮಿತ್ ಶಾ ಅವರ ಹೆಸರನ್ನು ನಾನೇ ಹೇಳಿರುವುದಾಗಿ ಡೇವಿಡ್ ಮಾರಿಸನ್ ಹೇಳಿದ್ದರು. ಇಂತಹ ಹೇಳಿಕೆಗಳು ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳಿಗೆ ಗಂಭೀರ ಸಮಸ್ಯೆ ಉಂಟುಮಾಡುತ್ತವೆ ಎಂದು ಜೈಸ್ವಾಲ್ ಹೇಳಿದ್ದಾರೆ.