CISFನ ಮಹಿಳಾ ಬೆಟಾಲಿಯನ್ ವಿಮಾನ ನಿಲ್ದಾಣ, ಮೆಟ್ರೊ, ವಿಐಪಿಗಳಿಗೆ ಭದ್ರತೆ ನೀಡಲಿದೆ : ಅಮಿತ್ ಶಾ
ಅಮಿತ್ ಶಾ | PC : PTI
ಹೊಸದಿಲ್ಲಿ : ವಿಮಾನ ನಿಲ್ದಾಣಗಳು, ಮೆಟ್ರೊ ರೈಲುಗಳಂತಹ ದೇಶದ ನಿರ್ಣಾಯಕ ಮೂಲಭೂತ ಸೌಕರ್ಯಗಳನ್ನು ರಕ್ಷಿಸುವ ಹಾಗೂ ವಿಐಪಿಗಳಿಗೆ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF)ಗೆ ನಿಯೋಜನೆಗೊಂಡಿರುವ ಮಹಿಳಾ ಬೆಟಾಲಿಯನ್ ಗೆ ವಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ತಿಳಿಸಿದ್ದಾರೆ.
ಕೇಂದ್ರ ಕೈಗಾರಿಕೆ ಭದ್ರತಾ ಪಡೆ (CISF)ಯ 1,000ಕ್ಕೂ ಅಧಿಕ ಸಿಬ್ಬಂದಿಯನ್ನು ಒಳಗೊಂಡ ಮೊಟ್ಟ ಮೊದಲ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರಕಾರ ಸೋಮವಾರ ಮಂಜೂರು ಮಾಡಿದೆ.
‘‘ರಾಷ್ಟ್ರ ನಿರ್ಮಾಣದ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವರ್ಧಿಸುವ ಮೋದಿ ಅವರ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿ CISFನ ಮೊಟ್ಟ ಮೊದಲ ಮಹಿಳಾ ಬೆಟಾಲಿಯನ್ ಆರಂಭಿಸಲು ಮೋದಿ ಸರಕಾರ ಅನುಮತಿ ನೀಡಿದೆ’’ ಎಂದು ಅವರು ತಿಳಿಸಿದ್ದಾರೆ
ಈ ನಿರ್ಧಾರ ರಾಷ್ಟ್ರವನ್ನು ರಕ್ಷಿಸುವ ನಿರ್ಣಾಯಕ ಕಾರ್ಯದಲ್ಲಿ ಭಾಗವಹಿಸುವ ಹೆಚ್ಚಿನ ಮಹಿಳೆಯರ ಆಕಾಂಕ್ಷೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತದೆ ಎಂದು ಅಮಿತ್ ಶಾ ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕೇಂದ್ರ ಕೈಗಾರಿಕೆ ಭದ್ರತಾ ಪಡೆಯಲ್ಲಿ ಪ್ರಸಕ್ತ 12 ಮೀಸಲು ತುಕುಡಿಗಳು ಇವೆ. 1.80 ಲಕ್ಷ ಸಿಬ್ಬಂದಿ ಪೈಕಿ ಶೇ. 7ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ.