ನಾಗಾ ಶಾಂತಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ: 21 ಸಂಸದರಿಂದ ಅಮಿತ್ ಶಾಗೆ ಪತ್ರ

ಅಮಿತ್ ಶಾ | PTI
ಹೊಸದಿಲ್ಲಿ: ನಾಗಾ ಶಾಂತಿ ಪ್ರಕ್ರಿಯೆಯ ಸ್ಥಿತಿಗತಿ ಕುರಿತು ಸಂಸತ್ತಿಗೆ ವಿವರವಾದ ಮಾಹಿತಿಯನ್ನು ನೀಡುವಂತೆ ಕೋರಿ 21 ಸಂಸದರ ಗುಂಪೊಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಬರೆದಿದೆ. ಮಾತುಕತೆಗಳಿಗೆ ಪೂರ್ಣಕಾಲಿಕ ಸಂಧಾನಕಾರರ ಕೊರತೆಯನ್ನು ಬೆಟ್ಟು ಮಾಡಿರುವ ಈ ಸಂಸದರು, ಇದು ಸುಮಾರು ಮೂರು ದಶಕಗಳಿಂದ ಸಾಧಿಸಿದ ಪ್ರಗತಿಯನ್ನು ಹಳಿ ತಪ್ಪಿಸುತ್ತದೆ. ನಂಬಿಕೆ ಮತ್ತು ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಶಾಶ್ವತ ಶಾಂತಿಯನ್ನು ಸಾಧಿಸಲು ಅಗತ್ಯವಾಗಿರುವ ಮಾತುಕತೆಗಳಿಗೆ 2021ರಿಂದ ಪೂರ್ಣಕಾಲಿಕ ಸಂಧಾನಕಾರರಿಲ್ಲ. ಪ್ರಜಾಪ್ರಭುತ್ವದ ಮೇಲ್ವಿಚಾರಣೆಯಿಲ್ಲದೆ ಈ ಕೆಲಸವನ್ನು ಅಧಿಕಾರಶಾಹಿಗೇ ಒಪ್ಪಿಸಬಾರದು ಎಂದು ಫೆ.3ರಂದು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.
ನಾಗಾ ಶಾಂತಿ ಪ್ರಕ್ರಿಯೆಯನ್ನು ರಾಷ್ಟ್ರೀಯ ಭದ್ರತೆ ಮತ್ತು ಸ್ಥಿರತೆಯ ನಿರ್ಣಾಯಕ ಆಧಾರಸ್ತಂಭವಾಗಿ ವ್ಯಾಪಕವಾಗಿ ಗುರುತಿಸಲಾಗಿದ್ದರೂ ಮಾರ್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಮಾತುಕತೆಗಳ ಸ್ಥಿತಿಗತಿ ಕುರಿತು ಸಂಸತ್ತಿಗೆ ಮಾಹಿತಿ ಇಲ್ಲದಿರುವುದು ತೀವ್ರ ಗೊಂದಲಕಾರಿಯಾಗಿದೆ. ಒಪ್ಪಂದದ ಸುತ್ತಲಿನ ನಿರಂತರ ಗೋಪ್ಯತೆ ಮತ್ತು ನಂತರದ ಮಾತುಕತೆಗಳಲ್ಲಿನ ಬಿಕ್ಕಟ್ಟು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಈ ಸಂಸದರು ಹೇಳಿದ್ದಾರೆ.
ಮಾತುಕತೆಗಳಲ್ಲಿ ಇಂತಹ ನಿಶ್ಚಲತೆಯು ದಶಕಗಳಿಂದ ಶ್ರಮ ಪಟ್ಟು ಗಳಿಸಿದ ನಂಬಿಕೆ ಮತ್ತು ಬೆಂಬಲವನ್ನು ದುರ್ಬಲಗೊಳಿಸಬಹುದು. ನಾಗಾ ಶಾಂತಿ ಪ್ರಕ್ರಿಯೆಯು ಐತಿಹಾಸಿಕವಾಗಿ ರಾಜಕೀಯ ಮತಭೇದಗಳನ್ನು ಮೀರಿ ದ್ವಿಪಕ್ಷೀಯ ಬೆಂಬಲವನ್ನು ಗಳಿಸಿದ್ದು, ಇದು ಅದರ ರಾಷ್ಟ್ರೀಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಸಂಸದರು ತಮ್ಮ ಜಂಟಿ ಪತ್ರದಲ್ಲಿ ತಿಳಿಸಿದ್ದಾರೆ.
ನಾಗಾ ರಾಜಕೀಯ ಸಮಸ್ಯೆಯನ್ನು ಬಗೆಹರಿಸಲು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಸಹಿ ಮಾಡಿದ್ದ ಮಾರ್ಗಸೂಚಿ ಒಪ್ಪಂದವನ್ನು ಕೇಂದ್ರ ಸರಕಾರವು ಗೌರವಿಸದಿದ್ದರೆ ತಾನು ಹಿಂಸಾತ್ಮಕ ಸಶಸ್ತ್ರ ಪ್ರತಿರೋಧವನ್ನು ಪುನರಾರಂಭಿಸಬಹುದು ಎಂದು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ನ ಇಸಾಕ್-ಮುವಿಯಾ ಬಣ(ಎನ್ಎಸ್ಸಿಎನ್-ಐಎಂ) ಕಳೆದ ವರ್ಷದ ನವಂಬರ್ನಲ್ಲಿ ಎಚ್ಚರಿಕೆಯನ್ನು ನೀಡಿತ್ತು.
2015ರಲ್ಲಿ ಅಂದಿನ ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ ಮತ್ತು ಎನ್ಎಸ್ಸಿಎನ್-ಐಎಂ ಪ್ರಧಾನ ಕಾರ್ಯದರ್ಶಿ ಥುಯಿಂಗ್ಲೆಂಗ್ ಮುವಿಯಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು. ರವಿ 2021ರಲ್ಲಿ ತಮಿಳುನಾಡಿನ ರಾಜ್ಯಪಾಲರಾಗಿ ವರ್ಗಾವಣೆಗೊಂಡ ಬಳಿಕ ಹೊಸ ಸಂಧಾನಕಾರರನ್ನು ನೇಮಿಸಲಾಗಿಲ್ಲ.