ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವಂತೆ ನಕ್ಸಲರಿಗೆ ಗೃಹ ಸಚಿವ ಅಮಿತ್ ಶಾ ಮನವಿ
ಕೇಂದ್ರ ಗೃಹ ಸಚಿವ ಅಮಿತ್ ಶಾ (PTI)
ಹೊಸದಿಲ್ಲಿ: ಹಿಂಸಾಚಾರವನ್ನು ಕೈಬಿಟ್ಟು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮತ್ತು ಶರಣಾಗುವಂತೆ ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ನಕ್ಸಲರ ವಿರುದ್ಧ ಸಂಪೂರ್ಣ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಛತ್ತೀಸ್ಗಢದ 55 ನಕ್ಸಲ್ ಹಿಂಸಾಚಾರದ ಸಂತ್ರಸ್ತರನ್ನು ಇಲ್ಲಿನ ತಮ್ಮ ನಿವಾಸದಲ್ಲಿ ಉದ್ದೇಶಿಸಿ ಮಾತನಾಡಿದ ಶಾ, ನಕ್ಸಲ್ ಹಿಂಸಾಚಾರ ಮತ್ತು ಸಿದ್ಧಾಂತವನ್ನು ದೇಶದಿಂದ ನಿರ್ಮೂಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಮಾರ್ಚ್ 31, 2026 ರಂದು ಮಾವೋವಾದಿಗಳು ಕೊನೆಯುಸಿರೆಳೆಯಲಿದ್ದಾರೆ ಎಂದು ಹೇಳಿದರು.
"ಈಶಾನ್ಯದಲ್ಲಿ ಉಗ್ರಗಾಮಿಗಳು ಮಾಡಿದಂತೆ ಹಿಂಸಾಚಾರವನ್ನು ಬಿಟ್ಟು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮತ್ತು ಶರಣಾಗುವಂತೆ ನಾನು ನಕ್ಸಲರಿಗೆ ಮನವಿ ಮಾಡುತ್ತೇನೆ. ಇದಕ್ಕೆ ಸ್ಪಂದನೆ ಸಿಗದೇ ಹೋದರೆ ನಕ್ಸಲರ ವಿರುದ್ಧ ಶೀಘ್ರದಲ್ಲೇ ಸಂಪೂರ್ಣ ಕಾರ್ಯಾಚರಣೆ ನಡೆಸಲಾಗುವುದು" ಎಂದು ಶಾ ಹೇಳಿದರು.
ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗಮನಾರ್ಹ ಯಶಸ್ಸನ್ನು ಸಾಧಿಸಿವೆ ಎಂದು ಕೇಂದ್ರ ಗೃಹ ಸಚಿವರು ಉಲ್ಲೇಖಿಸಿದರು.
ಸಮಸ್ಯೆ ಈಗ ಛತ್ತೀಸ್ಗಢದ ಕೇವಲ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದೆ. ಮಾವೋವಾದಿಗಳು ನೇಪಾಳದ ಪಶುಪತಿನಾಥದಿಂದ ಆಂಧ್ರಪ್ರದೇಶದ ತಿರುಪತಿಗೆ ಕಾರಿಡಾರ್ ಸ್ಥಾಪಿಸಲು ಯೋಜಿಸಿದ್ದರು. ಆದರೆ ಮೋದಿ ಸರ್ಕಾರ ಅದನ್ನು ನಾಶಪಡಿಸಿತು ಎಂದು ಗೃಹ ಸಚಿವರು ಹೇಳಿದರು.
ಛತ್ತೀಸ್ಗಢದ ನಕ್ಸಲ್ ಹಿಂಸಾಚಾರ-ಪೀಡಿತ ಜನರಿಗೆ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಗೃಹ ಸಚಿವಾಲಯವು ಶೀಘ್ರದಲ್ಲೇ ಕಲ್ಯಾಣ ಯೋಜನೆಯನ್ನು ರೂಪಿಸಲಿದೆ. ಉದ್ಯೋಗ, ಆರೋಗ್ಯ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಕಲ್ಯಾಣ ಕ್ರಮಗಳ ಮೂಲಕ ನಾವು ಯಾವುದೇ ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದರು.