ಅಮೆರಿಕಾದಲ್ಲಿ ಮೀಸಲಾತಿ ಕುರಿತ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅಮಿತ್ ಶಾ
ಅಮಿತ್ ಶಾ / ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಅಮೆರಿಕಾದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಈ ಹೇಳಿಕೆಯು ಕಾಂಗ್ರೆಸ್ ನ ಮೀಸಲಾತಿ ವಿರೋಧಿ ಮುಖವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಎಲ್ಲಿಯವರೆಗೂ ಇರುತ್ತದೊ ಅಲ್ಲಿಯವರೆಗೂ ಯಾರೂ ಮೀಸಲಾತಿಯನ್ನು ಹಿಂಪಡೆಯಲು ಸಾಧ್ಯವಿಲ್ಲ ಹಾಗೂ ದೇಶದ ಭದ್ರತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಹರಿಹಾಯ್ದಿದ್ದಾರೆ.
ಅಮೆರಿಕಾದ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ್ದ ರಾಹುಲ್ ಗಾಂಧಿ, ಭಾರತದಲ್ಲಿ ಸಮಾನತೆ ಪರಿಸ್ಥಿತಿ ಬಂದಾಗ ಕಾಂಗ್ರೆಸ್ ಪಕ್ಷವು ಮೀಸಲಾತಿಯನ್ನು ರದ್ದುಗೊಳಿಸುವ ಕುರಿತು ಚಿಂತಿಸುವುದು. ಆದರೆ, ಭಾರತದಲ್ಲೀಗ ಆ ಪರಿಸ್ಥಿತಿಯಿಲ್ಲ ಎಂಬ ಹೇಳಿಕೆ ನೀಡಿದ್ದರು. ಇದರ ಬೆನ್ನಿಗೇ ಅಮಿತ್ ಶಾರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, “ದೇಶವನ್ನು ವಿಭಜಿಸಲು ಪಿತೂರಿ ನಡೆಸುತ್ತಿರುವ ಶಕ್ತಿಗಳೊಂದಿಗೆ ನಿಂತುಕೊಳ್ಳುವುದು ಹಾಗೂ ದೇಶವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನ ದೇಶವಿರೋಧಿ ಹಾಗೂ ಮೀಸಲಾತಿ ವಿರೋಧಿ ಕಾರ್ಯಸೂಚಿಯನ್ನು ಬೆಂಬಲಿಸುವಾಗಲಿ ಅಥವಾ ವಿದೇಶಿ ವೇದಿಕೆಗಳಲ್ಲಿ ನಿಂತು ಭಾರತ ವಿರೋಧಿ ಹೇಳಿಕೆ ನೀಡುವಾಗಲಾಗಲಿ, ರಾಹುಲ್ ಗಾಂಧಿ ಯಾವಾಗಲೂ ದೇಶದ ಭದ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಹಾಗೂ ದೇಶದ ಭಾವನೆಗಳಿಗೆ ಘಾಸಿಯುಂಟು ಮಾಡುತ್ತಿದ್ದಾರೆ” ಎಂದೂ ಅವರು ಆರೋಪಿಸಿದ್ದಾರೆ.
ಪ್ರಾಂತೀಯತೆ, ಧರ್ಮ ಹಾಗೂ ಭಾಷೆಯ ಆಧಾರದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸುವ ಕಾಂಗ್ರೆಸ್ ರಾಜಕೀಯವು ರಾಹುಲ್ ಗಾಂಧಿ ಹೇಳಿಕೆಯಿಂದ ಬಯಲಾಗಿದೆ. ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಮೀಸಲಾತಿ ವಿರೋಧಿ ಮುಖವನ್ನು ಮುನ್ನೆಲೆಗೆ ತಂದಿದ್ದಾರೆ” ಎಂದೂ ಅವರು ಬರೆದುಕೊಂಡಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕನ ಮನಸ್ಸಿನಲ್ಲಿರುವುದು ಪದಗಳ ಮೂಲಕ ಹೊರ ಬಂದಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಬಿಜೆಪಿ ಎಲ್ಲಿಯವರೆಗೂ ಇರುತ್ತದೊ ಅಲ್ಲಿಯವರೆಗೂ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಅಥವಾ ದೇಶದ ಭದ್ರತೆಯೊಂದಿಗೆ ಆಟವಾಡಲು ಸಾಧ್ಯವಿಲ್ಲವೆಂದು ರಾಹುಲ್ ಗಾಂಧಿಗೆ ಹೇಳಲು ನಾನು ಬಯಸುತ್ತೇನೆ” ಎಂದೂ ಅವರು ಎಚ್ಚರಿಸಿದ್ದಾರೆ.