ನೆತನ್ಯಾಹು ಬಂಧಿಸುವಂತೆ ಹಂಗರಿಗೆ ಆಮ್ನೆಸ್ಟಿ ಆಗ್ರಹ

ಪ್ರಧಾನಿ ಬೆಂಜಮಿನ್ ನೆತನ್ಯಾಹು | PC : PTI
ಲಂಡನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರ ಹಂಗರಿಗೆ ಭೇಟಿ ನೀಡಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ, ಅವರನ್ನು ಬಂಧಿಸುವಂತೆ ಆಮ್ನೆಸ್ಟಿ ಇಂಟರ್ನ್ಯಾಷನಲ್ ಹಂಗರಿ ರಾಷ್ಟ್ರದ ಪ್ರಧಾನಿ ವಿಕ್ಟರ್ ಆರ್ಬನ್ರನ್ನು ಆಗ್ರಹಿಸಿದೆ.
ಗಾಝಾದಲ್ಲಿ ಇಸ್ರೇಲ್ ನ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ನೆತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ನವೆಂಬರ್ನಲ್ಲಿ ಬಂಧನ ವಾರಾಂಟ್ ಜಾರಿಗೊಳಿಸಿದೆ. ಐಸಿಸಿಯ ಸದಸ್ಯನಾಗಿರುವುದರಿಂದ ಹಂಗರಿ ಐಸಿಸಿ ಹೊರಡಿಸಿದ ಬಂಧನ ವಾರಂಟ್ ಅನ್ನು ಜಾರಿಗೊಳಿಸಬೇಕಿದೆ. ಆದರೆ ನೆತನ್ಯಾಹು ಅವರ ನಿಕಟ ಮಿತ್ರನಾಗಿರುವ ಆರ್ಬನ್, ತಾನು ವಾರಾಂಟ್ ಜಾರಿಗೊಳಿಸುವುದಿಲ್ಲ ಎಂದಿದ್ದಾರೆ.
ನೆತನ್ಯಾಹು ಆಪಾದಿತ ಯುದ್ದಾಪರಾಧಿ. ಹಸಿವನ್ನು ಯುದ್ಧ ವಿಧಾನವಾಗಿ ಬಳಸಿದ, ಉದ್ದೇಶಪೂರ್ವಕವಾಗಿ ನಾಗರಿಕರ ಮೇಲೆ ದಾಳಿ ಮಾಡಿದ, ಕೊಲೆ, ಕಿರುಕುಳ ಮತ್ತು ಇತರ ಅಮಾನವೀಯ ಕೃತ್ಯಗಳ ಆರೋಪ ಎದುರಿಸುತ್ತಿದ್ದಾರೆ. ಐಸಿಸಿಯ ಸದಸ್ಯ ರಾಷ್ಟ್ರವಾಗಿ ಹಂಗರಿ ನೆತನ್ಯಾಹುರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಬದ್ಧವಾಗಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಅಧಿಕಾರಿ ಎರಿಕಾ ಗ್ವುವೆರಾ-ರೊಸಾಸ್ ಹೇಳಿದ್ದಾರೆ.