ಗುಜರಾತ್ | ಅಮ್ರೇಲಿ ಲೈಂಗಿಕ ದೌರ್ಜನ್ಯ ಪ್ರಕರಣ: ಸರಕಾರಿ ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕಿಯರಿಗೆ ಕಿರುಕುಳ
ಸತತ ಎಂಟು ದಿನಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದ ಶಿಕ್ಷಕ

PC ; twocircles.net
ಅಮ್ರೇಲಿ (ಗುಜರಾತ್): ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಹೊಂದಿದ್ದ ಇಬ್ಬರು ಪುಟ್ಟ ಮುಸ್ಲಿಂ ಬಾಲಕಿಯರಾದ ಝೈನಾಬ್ (8) ಹಾಗೂ ಸಫೀನಾ (10) (ಹೆಸರು ಬದಲಿಸಲಾಗಿದೆ) ಮೇಲೆ ಶಿಕ್ಷಕನೊಬ್ಬ ಸತತ ಎಂಟು ದಿನಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿರುವ ಆಘಾತಕಾರಿ ಘಟನೆ ಅಮ್ರೇಲಿಯ ಭಾರತ್ ನಗರ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಒಂದು ದಿನ ಗಾಯಗೊಂಡಿದ್ದ ಝೈನಾಬ್ ಮನೆಯ ಮೂಲೆಯೊಂದರಲ್ಲಿ ಬಿಕ್ಕಳಿಸುತ್ತಿದ್ದ ದೃಶ್ಯವನ್ನು ಗಮನಿಸಿದ ಕುಟುಂಬದ ಸದಸ್ಯರು, ಆಕೆಯನ್ನು ಈ ಕುರಿತು ವಿಚಾರಿಸಿದಾಗ, ಈ ಅಮಾನುಷ ಅಪರಾಧ ಕೃತ್ಯ ಬೆಳಕಿಗೆ ಬಂದಿದೆ. ಈ ಕೃತ್ಯ ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ಕ್ಕಿಂತ ಕೆಲವೇ ದಿನಗಳ ಮುನ್ನ ನಡೆದಿದ್ದು, ದೇಶದ ರಾಜಕಾರಣಿಗಳು ಮಹಿಳಾ ಸಬಲೀಕರಣದ ಮಾತುಗಳನ್ನಾಡುವಾಗಲೇ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಝೈನಾಬ್ ಳ ಹಿರಿಯ ಸಹೋದರ, “ಶಿಕ್ಷಕ ಮಹೇಂದ್ರ ಪಟೇಲ್ ನನ್ನ ಸಹೋದರಿಯೊಂದಿಗೆ ನಡೆದುಕೊಂಡಿರುವುದು ಭಯಾನಕವಾಗಿದೆ. ನನ್ನ ಸಹೋದರಿ ಕೇವಲ ಎಂಟು ವರ್ಷ ವಯಸ್ಸಿನವಳಾಗಿದ್ದು, ಮೂರನೆ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ನಾವಿನ್ನೂ ಆಘಾತದಲ್ಲಿದ್ದರೂ, ಇದರ ವಿರುದ್ಧ ಧ್ವನಿಯೆತ್ತಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಶಿಕ್ಷಕ ಮಹೇಂದ್ರ ಪಟೇಲ್ ಈ ಹಿಂದೆ ಹಲವಾರು ದೈಹಿಕ ಹಲ್ಲೆ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿದ್ದರೂ, ಆತ ತನ್ನ ಆರೆಸ್ಸೆಸ್ ಸಂಪರ್ಕ ಹಾಗೂ ಹಿಂದೂ ಗುರುತಿನಿಂದಾಗಿ ತಪ್ಪಿಸಿಕೊಂಡಿದ್ದ ಎಂದು ಸಂತ್ರಸ್ತ ಬಾಲಕಿಯರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ದುಷ್ಕರ್ಮಿ ಶಿಕ್ಷಕನು ವಿದ್ಯಾರ್ಥಿಗಳಿಗೆ ಮದ್ಯ ಸೇವಿಸುವಂತೆ ಒತ್ತಾಯಿಸುತ್ತಿದ್ದ. ಕೆಲವೊಮ್ಮೆ ಅವರನ್ನು ಪ್ರಜ್ಞಾಹೀನರನ್ನಾಗಿಸಲು, ಅವರ ನೀರಿನ ಬಾಟಲಿಗಳಿಗೆ ಮದ್ಯ ಬೆರೆಸುತ್ತಿದ್ದ ಹಾಗೂ ಇನ್ನೂ ಕೆಲವೊಮ್ಮೆ ನಿಮ್ಮ ಪಾಲಿಗೆ ಮದ್ಯ ರಾಮಬಾಣ ಎಂದು ಮಕ್ಕಳನ್ನು ಪುಸಲಾಯಿಸುತ್ತಿದ್ದ ಎಂದೂ ಅವರು ದೂರಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಝೈನಾಬ್ ಚಿಕ್ಕಪ್ಪ, “ಇಂತಹ ದೈಹಿಕ ಹಲ್ಲೆಗಳು ಅಸಹ್ಯದ ಪರಮಾವಧಿಯಾಗಿವೆ. ಆದರೆ, ದುಷ್ಕರ್ಮಿಗೆ ಹಿಂದುತ್ವ ಸಂಘಟನೆಗಳ ಸಂಪರ್ಕವಿರುವುದರಿಂದ, ನ್ಯಾಯ ಪಡೆಯುವುದು ನಿಜಕ್ಕೂ ಕಷ್ಟಕರವಾಗಿದೆ. ನಿಮ್ಮನ್ನು ಮುಗಿಸುತ್ತೇನೆ ಎಂದೂ ಆತ ನಮ್ಮ ಪುತ್ರಿಯರಿಗೆ ಬೆದರಿಕೆ ಒಡ್ಡಿದ್ದಾನೆ” ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ಈ ಘಟನೆಯಿಂದ ತೀರಾ ಕುಗ್ಗಿ ಹೋಗಿರುವ ಸಫೀನಾರ ತಂದೆ, ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅವರ ಪರವಾಗಿ ಮಾತನಾಡಿದ ಸಫೀನಾಳ ಚಿಕ್ಕಪ್ಪ, ಮಹಾನಗರ ಪಾಲಿಕೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳೂ ಮುಸ್ಲಿಮರಾಗಿದ್ದು, ಮುಸ್ಲಿಂ ಸಮುದಾಯದ ವಿರುದ್ಧ ತೀವ್ರವಾಗಿ ಬೆಳೆಯುತ್ತಿರುವ ದ್ವೇಷಕ್ಕೆ ಈ ಘಟನೆ ನಿದರ್ಶನವಾಗಿದೆ. ನಮಗೆ ಆರೋಪಿಗಿರುವಂತೆ ರಾಜಕೀಯ ಬೆಂಬಲವಿಲ್ಲದಿದ್ದರೂ, ನಮಗೆ ಆತ್ಮಾಭಿಮಾನವಿದೆ. ಆದರೆ, ನಮಗೆ ಅನ್ಯಾಯವಾಗುವ ಸಾಧ್ಯತೆಗಳು ಕಂಡು ಬರುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
“ಈ ಶಿಕ್ಷಕ ನಮ್ಮ ಮಕ್ಕಳ ಮೇಲೆ ಎಷ್ಟು ದೀರ್ಘಕಾಲದಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಬುದು ನಮಗೆ ತಿಳಿದಿಲ್ಲ. ಶಾಲೆಯ ಆಡಳಿತ ಮಂಡಳಿಯನ್ನು ಮತ್ತೆ ಹೇಗೆ ನಂಬುವುದು ಎಂಬುದು ನಮಗೆ ತಿಳಿಯುತ್ತಿಲ್ಲ” ಎಂದೂ ಅವರು ಹೇಳಿದ್ದಾರೆ.
ಅಮ್ರೇಲಿಯಲ್ಲಿರುವ ಭಾರತ್ ನಗರ್ ಮಹಾನಗರ ಪಾಲಿಕೆ ಶಾಲೆಯಲ್ಲಿ ನಡೆದಿರುವ ಈ ಘಟನೆಯಿಂದಾಗಿ, ಕೇವಲ ಇಬ್ಬರು ಶಿಕ್ಷಕರನ್ನು ಹೊಂದಿರುವ ಈ ಶಾಲೆಯು ‘ಗುಜರಾತ್ ಮಾದರಿ’ಯ ನೈಜ ಮುಖವನ್ನು ಜಗತ್ತಿಗೆ ಅನಾವರಣಗೊಳಿಸಿದೆ.
ಸೌಜನ್ಯ: twocircles.net