ಅನಂತಪದ್ಮನಾಭ ಸ್ವಾಮಿ ದೇವಾಲಯದಿಂದ 1.57 ಕೋಟಿ ರೂ. ತೆರಿಗೆ ಬಾಕಿ | ಸಿಜಿಎಸ್ಟಿಯಿಂದ ನೋಟಿಸ್ ಜಾರಿ
ತಿರುವನಂತಪುರದ ಶ್ರೀಪದ್ಮನಾಭ ಸ್ವಾಮಿ ದೇವಾಲಯ | PC : X
ತಿರುವನಂತಪುರ : 1.57 ಕೋಟಿ ರೂ. ತೆರಿಗೆ ಪಾವತಿ ಬಾಕಿಯಿರುವ ಬಗ್ಗೆ ಅತ್ಯಂತ ಅಮೂಲ್ಯವಾದ ನಿಧಿಗಳಿರುವ ರಹಸ್ಯ ಕೊಠಡಿಗಳಿಂದ ಪ್ರಖ್ಯಾತವಾಗಿರುವ ತಿರುವನಂತಪುರದ ಶ್ರೀಪದ್ಮನಾಭ ಸ್ವಾಮಿ ದೇವಾಲಯಕ್ಕೆ ಕೇಂದ್ರೀಯ ಜಿಎಸ್ಟಿ ಇಲಾಖೆಯು ನೋಟಿಸ್ ಜಾರಿಗೊಳಿಸಿದೆ.
ಭಕ್ತಾದಿಗಳಿಗೆ ಪಾರಂಪರಿಕ ವಸ್ತ್ರಗಳನ್ನು ಬಾಡಿಗೆ ನೀಡುವಂತಹ ಸೇವೆಗಳು ಹಾಗೂ ವಿವಿಧ ವಸ್ತುಗಳ ಮಾರಾಟಗಳಿಗಾಗಿ ಪಾವತಿಸಬೇಕಾದ ತೆರಿಗೆ ಬಾಕಿಯಿರುವುದಾಗಿ ಸಿಜಿಎಸ್ಟಿ ನೋಟಿಸ್ನಲ್ಲಿ ತಿಳಿಸಿದೆ.
ಆದರೆ ಈ ನೋಟಿಸ್ ಬಗ್ಗೆ ತಾನು ಈಗಾಗಲೇ ಆಕ್ಷೇಪವನ್ನು ಸಲ್ಲಿಸಿರುವುದಾಗಿ ದೇವಾಯದ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಬಾಕಿಯನ್ನು ಸಿಜಿಎಸ್ಟಿಯು ಲೆಕ್ಕಹಾಕುವಾಗ, ಆರಾಧನಾ ಕೇಂದ್ರಗಳಿಗೆ ಇರುವ ವಿವಿಧ ರಿಯಾಯಿತಿಗಳನ್ನು ಅದು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಅವರು ಹೇಳಿದ್ದಾರೆ. ದೇವಾಲಯದ ತೆರಿಗೆ ಪಾವತಿಗೆ ಆರ್ಹವಾದ ಆದಾಯವು 16 ಲಕ್ಷ ರೂ. ಮಾತ್ರವಾಗಿದ್ದು, ಅದರ ತೆರಿಗೆ ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆಯೆಂದು ದೇವಾಲಯದ ಮೂಲಗಳು ತಿಳಿಸಿವೆ.
ತೆರಿಗೆ ಬಾಕಿಯಿರಿಸಿರುವುದಕ್ಕೆ ಸಂಬಂಧಿಸಿ ಸಿಜಿಎಸ್ಟಿ ಅಧಿಕಾರಿಗಳು ಈಗಾಗಲೇ ದೇವಾಲಯದ ಕಚೇರಿಯಲ್ಲಿ ಪರಿಶೀಲನೆಯನ್ನು ನಡೆಸಿರುವುದಾಗಿ ಮೂಲಗಳು ತಿಳಿಸಿವೆ.