ಆಂಧ್ರಪ್ರದೇಶ: ಜಿಬಿಎಸ್ ಗೆ 10 ದಿನಗಳಲ್ಲಿ ಇಬ್ಬರು ಬಲಿ

ಸಾಂದರ್ಭಿಕ ಚಿತ್ರ
ಅಮರಾವತಿ: ದೇಹದ ಪ್ರತಿರೋಧ ವ್ಯವಸ್ಥೆಯು ನರಮಂಡಲದ ಮೇಲೆ ದಾಳಿ ಮಾಡುವ ವಿಲಕ್ಷಣ ಕಾಯಿಲೆ ಗಿಲಿಯಾನ್ ಬಾರಿ ಸಿಂಡ್ರೋಮ್(ಜಿಬಿಎಸ್)ನಿಂದಾಗಿ ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ರವಿವಾರ ಗುಂಟೂರಿನ ಸರಕಾರಿ ಆಸ್ಪತ್ರೆಯಲ್ಲಿ ಕಮಲಮ್ಮ(45)ಎನ್ನುವವರು ಮೃತಪಟ್ಟಿದ್ದರೆ,10 ದಿನಗಳ ಹಿಂದೆ ಶ್ರೀಕಾಕುಳಂನಲ್ಲಿಯ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 10ರ ಹರೆಯದ ಬಾಲಕ ಮೃತಪಟ್ಟಿದ್ದಾನೆ ಎಂದು ಅವರು ಮಾಹಿತಿ ನೀಡಿದರು.
ಸದ್ಯ ಆಂಧ್ರಪ್ರದೇಶದಲ್ಲಿ 17 ಜಿಬಿಎಸ್ ಪ್ರಕರಣಗಳಿವೆ. ಇದು ಸಾಂಕ್ರಾಮಿಕ ಕಾಯಿಲೆಯಲ್ಲ ಮತ್ತು ಪ್ರತಿ ಒಂದು ಲಕ್ಷ ಜನರಲ್ಲಿ ಇಬ್ಬರಲ್ಲಿ ಸೋಂಕು ಕಂಡು ಬರುತ್ತದೆ. ಇದೊಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು, ದಿಢೀರ್ ಕಾಣಿಸಿಕೊಂಡಿದ್ದಲ್ಲ ಎಂದು ಅವರು ಹೇಳಿದರು.
2024ರಲ್ಲಿ ಈ ಕಾಯಿಲೆಯ ಒಟ್ಟು 257 ಪ್ರಕರಣಗಳು ವರದಿಯಾಗಿದ್ದವು. ತಿಂಗಳೊಂದಕ್ಕೆ ಸರಾಸರಿ 25 ಪ್ರಕರಣಗಳು ವರದಿಯಾಗುತ್ತವೆ ಎಂದು ಹೇಳಿದ ಯಾದವ್, ಹೆಚ್ಚಿನ ಪ್ರಕರಣಗಳಲ್ಲಿ ಸಾಮಾನ್ಯ ಚಿಕಿತ್ಸೆಯಿಂದ ಗುಣಪಡಿಸಬಹುದು. ಪ್ರಕರಣ ಗಂಭೀರವಾಗಿದ್ದರೆ ಇಮ್ಯುನೋಗ್ಲೋಬುಲಿನ್ ಚುಚ್ಚುಮದ್ದು ನೀಡಿಕೆ ಮತ್ತು ತೀವ್ರ ನಿಗಾ ಘಟಕದಲ್ಲಿ ದಾಖಲಾತಿ ಅಗತ್ಯವಾಗುತ್ತದೆ ಎಂದು ತಿಳಿಸಿದರು.