ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ನಿಂದ 9 ಗ್ಯಾರಂಟಿ ಘೋಷಣೆ
Photo: PTI
ಹೊಸದಿಲ್ಲಿ: ಆಂಧ್ರಪ್ರದೇಶದಲ್ಲಿ ಮೇ 13ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ವಾರ್ಷಿಕ 2 ಲಕ್ಷ ರೂ., 2 ಲಕ್ಷ ರೂ. ಸಾಲಮನ್ನಾ ಸೇರಿದಂತೆ 9 ಗ್ಯಾರಂಟಿಗಳನ್ನು ಘೋಷಿಸಿದೆ.
ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದ ಎಪಿಸಿಸಿ ವರಿಷ್ಠೆ ಸಿ ಶರ್ಮಿಳಾ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ತನ್ನ ಮೊದಲ ಗ್ಯಾರಂಟಿಯಾಗಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಖಾತರಿ ನೀಡಲಿದೆ ಎಂದಿದ್ದಾರೆ.
‘‘ಪ್ರತಿ ಬಡ ಕುಟುಂಬ ತಿಂಗಳಿಗೆ 8,500 ಅಂದರೆ, ವರ್ಷಕ್ಕೆ 1 ಲಕ್ಷ ರೂ. ಪಡೆಯಲಿದೆ. ಇದನ್ನು ಮಹಿಳಾ ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾತ್ರ ನೀಡಲಾಗುವುದು. ಇದು ಪಕ್ಷದ ಎರಡನೇ ಗ್ಯಾರಂಟಿಯಾಗಿರಲಿದೆ’’ ಎಂದು ಅವರು ಹೇಳಿದ್ದಾರೆ.
‘‘ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಗೆ ಶೇ. 50 ಹೆಚ್ಚುವರಿ, ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕನಿಷ್ಠ ವೇತನ ಪ್ರತಿ ದಿನ 400 ರೂ.ಗೆ ಏರಿಕೆ., ಕೆ.ಜಿ.ಯಿಂದ ಪಿ.ಜಿ. ವರೆಗೆ ಉಚಿತ ಶಿಕ್ಷಣ ನೀಡಲಾಗುವುದು’’ ಎಂದು ಅವರು ತಿಳಿಸಿದ್ದಾರೆ.
ಬಡ ಮನೆ ರಹಿತ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಮನೆ, ಫಲನಾನುಭವಿಗಳಿಗೆ 4 ಸಾವಿರ ರೂ. ಹಾಗೂ ಅಂಗವಿಕಲ ವ್ಯಕ್ತಿಗಳಿಗೆ 6 ಸಾವಿರ ರೂ. ಸಾಮಾಜಿಕ ಭದ್ರತೆಯ ಪಿಂಚಣಿ ಗ್ಯಾರಂಟಿಯನ್ನು ಪಕ್ಷ ನೀಡಲಿದೆ ಎಂದು ಶರ್ಮಿಳಾ ತಿಳಿಸಿದ್ದಾರೆ.