ಸಾಲಗಳ ಬಗ್ಗೆ ದೂರುವ ಬದಲು ಆಂಧ್ರಪ್ರದೇಶ ಮುಖ್ಯಮಂತ್ರಿ ಚುನಾವಣಾ ಭರವಸೆಗಳತ್ತ ಗಮನ ಹರಿಸಬೇಕು: ವೈ.ಎಸ್.ಶರ್ಮಿಳಾ

PC | PTI
ಅಮರಾವತಿ: ರಾಜ್ಯದ ಸಾಲಗಳ ಬಗ್ಗೆ ದೂರುವ ಬದಲು ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಮನ ಹರಿಸಬೇಕು ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ತಾಕೀತು ಮಾಡಿದ್ದಾರೆ.
2024ರ ಚುನಾವಣಾ ಸಂದರ್ಭದಲ್ಲಿ ಟಿಡಿಪಿ ನೇತೃತ್ವದ ಎನ್ಡಿಎ ನೀಡಿದ್ದ ಆರು ಭಾರಿ ಭರವಸೆಗಳು, ಆರು ಭಾರಿ ವೈಫಲ್ಯಗಳಾಗಿವೆ ಎಂದು ಛೇಡಿಸಿರುವ ಅವರು, ತಮ್ಮ ಮೇಲೆ ವಿಶ್ವಾಸವಿರಿಸಿದ್ದ ಜನರಿಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಚುನಾವಣಾ ಸಂದರ್ಭದಲ್ಲಿ ಭರವಸೆಗಳನ್ನು ನೀಡುವಾಗ ನಿಮಗೆ ಆರ್ಥಿಕ ದುಸ್ಥಿತಿಯ ಬಗ್ಗೆ ತಿಳಿದಿರಲಿಲ್ಲವೆ? ಸೂಪರ್ ಸಿಕ್ಸ್ ಭರವಸೆಗಳನ್ನು ರೂಪಿಸುವಾಗ ನೀವು ರಾಜ್ಯದ ಆರ್ಥಿಕ ಹೊರೆಯನ್ನು ಗಮನಿಸಿದ್ದಿರಾ? ರಾಜ್ಯವು 14 ಲಕ್ಷ ಕೋಟಿ ರೂಪಾಯಿ ಸಾಲ ಹೊಂದಿದೆ ಎಂದು ನೀವು ಹೇಳಿದ್ದೀರಾ” ಎಂದು ಎಕ್ಸ್ ಪೋಸ್ಟ್ ನಲ್ಲಿ ಶರ್ಮಿಳಾ ವಾಗ್ದಾಳಿ ನಡೆಸಿದ್ದಾರೆ.
2019ರಿಂದ 2024ರವರೆಗೆ ಈ ಹಿಂದೆ ಇದ್ದ ವೈಎಸ್ಆರ್ಸಿಪಿ ಸರಕಾರದ ಅವಧಿಯಲ್ಲಿ ಹದಗೆಟ್ಟಿದ್ದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ನೀತಿ ಆಯೋಗದ ಮುಂದೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವರದಿಯೊಂದನ್ನು ಮಂಡಿಸಿದ ನಂತರ, ಶರ್ಮಿಳಾರಿಂದ ಈ ಹೇಳಿಕೆ ಹೊರ ಬಿದ್ದಿದೆ.